ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್.ಡಿ.ಎ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆಗೆ ಶರಣಾದ ದ್ವಿತೀಯ ದರ್ಜೆ ಸಹಾಯಕ. ತಹಶೀಲ್ದಾರ್ ಕೊಠಡಿಯಲ್ಲಿ ಇವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ
ನಿನ್ನೆಯಷ್ಟೇ ಸವದತ್ತಿ ತಹಶೀಲ್ದಾರ್ ಕಚೇರಿಗೆ ರುದ್ರಣ್ಣ ಯಡವಣ್ಣವರ ವರ್ಗಾವಣೆಗೊಂಡಿದ್ದರು. ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಮೃತ ರುದ್ರಣ್ಣ ಯಡವಣ್ಣವರ ಪತ್ನಿ ಸೇರಿ ಕುಟುಂಬಸ್ಥರು ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದರು. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಸ್ಪಷ್ಟವಾಗಲಿದೆ.
ಇದನ್ನೂ ಓದಿ: 'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
ಡಿಸಿಪಿ ರೋಹಣ ಜಗದೀಶ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. "ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಒಂದು ವೇಲ್ ಮೂಲಕ ನೇಣು ಹಾಕಿಕೊಳ್ಳಲಾಗಿದೆ. ಇನ್ನು ತಹಶೀಲ್ದಾರ್ ಕೊಠಡಿಯಲ್ಲಿ ಸಿಸಿಟಿವಿ ಕಂಡು ಬಂದಿಲ್ಲ. ಹೊರಗಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಇನ್ನು ಮೃತ ವ್ಯಕ್ತಿ ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುತ್ತೇವೆ" ಎಂದರು.
ಇನ್ನು ವಾಟ್ಸಾಪ್ ಗ್ರೂಪ್ ಸಂದೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಸೊಶಿಯಲ್ ಮಿಡಿಯಾ, ವಾಟ್ಸಾಪ್ ಗ್ರೂಪ್ನಲ್ಲಿ ಮೆಸೇಜ್ ಹಾಕಿರಬಹುದು. ಆದರೆ, ಸತ್ಯಾಸತ್ಯತೆ ಗೊತ್ತಾಗಬೇಕಾದರೆ ಕೂಲಂಕುಶವಾಗಿ ತನಿಖೆ ಆಗಬೇಕು. ಈ ಬಗ್ಗೆ ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ" ಎಂದು ರೋಹಣ ಜಗದೀಶ ತಿಳಿಸಿದ್ದಾರೆ.