ಬೆಂಗಳೂರು: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ 1ರ ಪರೀಕ್ಷಾ ಕೇಂದ್ರಗಳಿಗೆ ಕೊಠಡಿ ಮೇಲ್ವಿಚಾರಕರಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರನ್ನು (ಜಿಪಿಟಿ) ನೇಮಕ ಮಾಡಿಕೊಂಡಿದ್ದು, ಅಗತ್ಯ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಅದರಂತೆ ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ಜಿಲ್ಲಾ ಹಂತದಲ್ಲಿ ಗುರುತಿಸಿ ಪಟ್ಟಿಯನ್ನು ಮಂಡಳಿಗೆ ಸಲ್ಲಿಸಲಾಗಿದೆ.
ಮುಖ್ಯ ಅಧೀಕ್ಷಕರಲ್ಲಿ ಪ್ರತೀ ತಾಲೂಕಿನಿಂದ ಇಬ್ಬರು ಅನುಭವಿ ಮತ್ತು ಕ್ರಿಯಾಶೀಲ ಮುಖ್ಯ ಅಧೀಕ್ಷಕರಿಗೆ ಮತ್ತು ತಾಲೂಕು ನೋಡಲ್ ಅಧಿಕಾರಿಗಳಿಗೆ ಮಂಡಳಿ ಹಂತದಲ್ಲಿ ದಿನಾಂಕ 12/03/2024ರಂದು 3 ಗಂಟೆಯಿಂದ 5ರವರೆಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ವಿಡಿಯೋ ಕಾನ್ಸರೆನ್ಸ್‌ನಲ್ಲಿ ತರಬೇತಿ: ವಿಡಿಯೋ ಕಾನ್ಸರೆನ್ಸ್‌ನಲ್ಲಿ ತರಬೇತಿ ಪಡೆದ ಮುಖ್ಯ ಅಧೀಕ್ಷಕರು ಮತ್ತು ತಾಲೂಕು ನೋಡಲ್ ಅಧಿಕಾರಿಗಳು ಆಯಾ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಳ್ಳುವ ಕೊಠಡಿ ಮೇಲ್ವಿಚಾರಕರು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಆಯಾ ತಾಲೂಕು ಹಂತದಲ್ಲಿ ತರಬೇತಿ ನೀಡಬೇಕಿದೆ. ಆದ್ದರಿಂದ ಪ್ರತಿ ತಾಲೂಕಿನಿಂದ ಇಬ್ಬರು ಮುಖ್ಯ ಅಧೀಕ್ಷಕರು ಮತ್ತು ತಾಲೂಕು ನೋಡಲ್ ಅಧಿಕಾರಿಗಳನ್ನು ತರಬೇತಿಗೆ ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್‌ಗೆ ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾ ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿಗಳು ಉಪಸ್ಥಿತರಿರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಸುತ್ತೋಲೆ ಮೂಲಕ ತಿಳಿಸಲಾಗಿದೆ.
ಆಹ್ವಾನಿತ ಎಲ್ಲಾ ಅಧಿಕಾರಿಗಳು, ಪ್ರತಿ ತಾಲೂಕಿನಿಂದ ಇಬ್ಬರು ಮುಖ್ಯ ಅಧೀಕ್ಷಕರು ಹಾಗೂ ತಾಲೂಕು ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಆಯಾ ಜಿಲ್ಲಾ ಡಯಟ್ ಸ್ವೀಕೃತಿ ಕೇಂದ್ರಗಳಲ್ಲಿ ಮಾತ್ರ ವಿಡಿಯೋ ಕಾನ್ಸರೆನ್ಸ್‌ಗೆ ಹಾಜರಾಗುವಂತೆ ಸೂಚಸಲಾಗಿದೆ. ವಿಡಿಯೋ ಕಾನ್ಸರೆನ್ಸ್‌ಗೆ ಸಂಪರ್ಕ ಸಾಧಿಸಲು 300300 ಸಂಖ್ಯೆಗೆ ಕರೆ ಮಾಡುವಂತೆಯೂ ನಿರ್ದೇಶಿಸಲಾಗಿದೆ.
ಇದನ್ನೂಓದಿ:'ಶಿಕ್ಷಣದಲ್ಲಿ ಸ್ಪಷ್ಟ ನೀತಿಯ ಕೊರತೆ': ಶಿಕ್ಷಣ ತಜ್ಞರ ಸಭೆ ಕರೆಯುವಂತೆ ಎನ್.ರವಿಕುಮಾರ್ ಆಗ್ರಹ