ಮೈಸೂರು: ಅಯೋಧ್ಯೆಯ ರಾಮಮಂದಿರ ಇಂದು ಚರಿತಾತ್ಮಕ ಘಟನೆಗೆ ಸಾಕ್ಷಿಯಾಗಿದೆ, ನಮ್ಮ ತಾತ ಮುತ್ತಾತರ, ಸಾಧು ಸಂತರ 500 ವರ್ಷಗಳ ತಪಸ್ಸಿಗೆ ಫಲ ಸಿಕ್ಕಿದೆ ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಆಶ್ರಮದಲ್ಲಿ ಶ್ರೀರಾಮ ದೇವರ ಮಹಾ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಇಡೀ ಪ್ರಪಂಚಕ್ಕೆ ಒಳಿತಾಗಲಿ ಎಂದು ಅವರು ಹಾರೈಸಿದರು.
![sri-rama-coronation-held-in-ganapati-satchidananda-ashram-at-mysuru](https://etvbharatimages.akamaized.net/etvbharat/prod-images/22-01-2024/kn-mys-04-ganapathi-ashram-vis-ka10003_22012024171147_2201f_1705923707_582.jpg)
ಬಳಿಕ ಮಾತನಾಡಿದ ಅವರು, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಮ್ಮ ದತ್ತಪೀಠದಲ್ಲೂ ರಾಮೋತ್ಸವ ಹಮ್ಮಿಕೊಂಡಿದ್ದೇವೆ ಜೊತೆಗೆ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದ್ದೇವೆ. ಹಿಂದೆ ನಾವು ಅಯೋಧ್ಯೆಗೆ ಹೋಗಿದ್ದಾಗ ಶತಶ್ಲೋಕಿ ರಾಮಾಯಣ ಪಾರಾಯಣ ಮಾಡಿ ಬಂದಿದ್ದೆವು. ಆಗಲೇ ಅಯೋಧ್ಯೆಯಲ್ಲಿ ಇನ್ನು 12 ವರ್ಷದೊಳಗೆ ರಾಮನ ಆಲಯ ನಿರ್ಮಾಣವಾಗುತ್ತದೆ ಎಂದು ಸಂಕಲ್ಪ ಮಾಡಿದ್ದೆವು, ಅದು ಇಂದು ನೆರವೇರಿದೆ. ಇದು ನನಗೆ ಅತ್ಯಂತ ಸಂತಸ ತಂದಿದೆ ಎಂದು ತಿಳಿಸಿದರು.
![sri-rama-coronation-held-in-ganapati-satchidananda-ashram-at-mysuru](https://etvbharatimages.akamaized.net/etvbharat/prod-images/22-01-2024/kn-mys-04-ganapathi-ashram-vis-ka10003_22012024171147_2201f_1705923707_547.jpg)
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಂತಹ ಅದ್ಭುತ ಕ್ಷಣ ನೋಡಿ ನಮಗೆ ರೋಮಾಂಚನವಾಯಿತು. ಬಾಲರಾಮನ ಮೂರ್ತಿಯನ್ನು ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವುದು ಅತ್ಯಂತ ಸಂತಸ ತಂದಿದೆ, ಅವರಿಗೆ ಒಳ್ಳೆಯದಾಗಲಿ. ಅರುಣ್ ಯೋಗಿರಾಜ್ ಅವರ ತಂದೆ ಕೂಡ ನಮ್ಮ ಆಶ್ರಮದ ಭಕ್ತರು, ಅವರು ಮೈಸೂರಿನವರು ಎಂಬುದೇ ಅತಿ ಸಂತಸದ ವಿಷಯ. ಶ್ರೀ ರಾಮನಿಗೂ ನಮ್ಮ ಕರ್ನಾಟಕಕ್ಕೂ ಸಂಬಂಧವಿದೆ. ಶ್ರೀರಾಮನು ಬಂದು ಹೋದ ಅನೇಕ ಕ್ಷೇತ್ರಗಳು ಇಲ್ಲಿವೆ. ಇದು ಹನುಮನ ನಾಡು. ಕೆಲವರು ರಾಮ ಸ್ಮರಣೆ ಮಾಡದೇ, ರಾಮ ದರ್ಶನ ಮಾಡದೆ ದೂರ ಇದ್ದಾರೆ. ಆದರೆ, ಇಂತಹ ಶುಭದಿನದಲ್ಲಿ ರಾಮನ ದರ್ಶನ ಮಾಡದೆ ಇರಬಾರದು. ಭರತ ಭೂಮಿಯಲ್ಲಿ ಜನಿಸಿದ ನಾವೆಲ್ಲ ರಾಮನ ಅನುಯಾಯಿಗಳು, ಎಲ್ಲರ ಮೇಲೂ ರಾಮನ ಕೃಪೆ ಇರಲಿ ಎಂದು ಶ್ರೀಗಳು ಶುಭ ಹಾರೈಸಿದರು.
![sri-rama-coronation-held-in-ganapati-satchidananda-ashram-at-mysuru](https://etvbharatimages.akamaized.net/etvbharat/prod-images/22-01-2024/kn-mys-04-ganapathi-ashram-vis-ka10003_22012024171147_2201f_1705923707_967.jpg)
ಇಂದು ಬೆಳಿಗ್ಗೆ 9 ಗಂಟಗೆ ದತ್ತಪೀಠದ ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದಿಂದ ನಾದಮಂಟಪಕ್ಕೆ ಶ್ರೀರಾಮದೇವರ ರಥೋತ್ಸವ ನಡೆಯಿತು. ಇದೇ ವೇಳೆ ಯಾಗಶಾಲೆಯಲ್ಲಿ ಶ್ರೀರಾಮತಾರಕ ಮಹಾಯಾಗ ನೆರವೇರಿಸಲಾಯಿತು. ನಂತರ ಶ್ರೀರಾಮದೇವರ ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಹಾಗೂ ಶತ ಶ್ಲೋಕ ಪಾರಾಯಣ ಮಾಡಲಾಯಿತು. ಅವಧೂತ ದತ್ತ ಪೀಠದಲ್ಲಿ ಭಕ್ತರೆಲ್ಲರಿಗೂ ಇಂದು ಹಬ್ಬದೂಟವನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ:ಜನವರಿ 22 ಬರೀ ದಿನಾಂಕವಲ್ಲ- ಹೊಸಶಕೆಯ ಆರಂಭ: ಪ್ರಧಾನಿ ಮೋದಿ ಬಣ್ಣನೆ