ಬೆಳಗಾವಿ: ಸವದತ್ತಿ ಯಲ್ಲಮ್ಮ ಶಕ್ತಿ ದೇವಿ. ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯ ದೇವತೆ. ಭಾಷೆ, ಜಾತಿ, ಗಡಿ, ಸೀಮೆಗಳ ಎಲ್ಲೆ ಮೀರಿ ಭಕ್ತಿಯ ಹೊಳೆ ಹರಿಸುವ ಮಹಾತಾಯಿ ಎಂಬುದು ಭಕ್ತರ ನಂಬಿಕೆ. ರಾಜ್ಯದಲ್ಲೇ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿ ಸಮೀಪದ ಯಲ್ಲಮ್ಮನಗುಡ್ಡ ಖ್ಯಾತಿ ಗಳಿಸಿದೆ. ಸ್ವತಃ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರೇ ಹೇಳುವಂತೆ ರಾಜ್ಯದಲ್ಲೇ ಹೆಚ್ಚು ಪ್ರವಾಸಿಗರು ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡುತ್ತಾರೆ. ಆದರೆ, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸದೇ ಇರುವುದು ವಿಪರ್ಯಾಸ.
ಆದರೆ, ಇತ್ತೀಚೆಗೆ ಯಲ್ಲಮ್ಮನ ಗುಡ್ಡದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ದೇಶ-ವಿದೇಶದಿಂದ ಬರುವ ಪ್ರವಾಸಿಗರು ಉಳಿದುಕೊಳ್ಳಲು ಸ್ಟಾರ್ ಹೋಟೆಲ್, ಗುಡ್ಡದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಲು ಟೂರಿಸ್ಟ್ ಗೈಡ್ಗಳ ಕೊರತೆಯಿದೆ. ಇನ್ನು ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳಲ್ಲಿ ಸೂಚನಾ ಫಲಕಗಳಿಲ್ಲ. ಗುಡ್ಡದ ಸಮೀಪದಲ್ಲೇ ಮಲಪ್ರಭಾ ನದಿ ಹರಿದು ಹೋಗಿದ್ದು, ಅಲ್ಲಿಯೂ ವಾಟರ್ ಸ್ಪೋರ್ಟ್ಸ್ ಯೋಜನೆ ಕೈಗೊಂಡರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು. ಆದರೆ, ಪ್ರವಾಸೋದ್ಯಮ ಇಲಾಖೆ ಇತ್ತ ಆಸಕ್ತಿ ತೋರುತ್ತಿಲ್ಲ ಎಂಬುದು ಭಕ್ತರ ದೂರು.
ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲರ ಆಸಕ್ತಿಯಿಂದ ಯಲ್ಲಮ್ಮನಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಈಗಲಾದರೂ ಗುಡ್ಡದಲ್ಲಿ ಅಭಿವೃದ್ಧಿ ಹೊಳೆ ಹರಿದು, ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಬಹುದೆಂಬ ನಿರೀಕ್ಷೆ ಈ ಭಾಗದ ಜನರದ್ದು.
ಒಂದೂವರೆ ವರ್ಷದಲ್ಲಿ 2.44 ಕೋಟಿ ಭಕ್ತರ ಭೇಟಿ: 2023ರಲ್ಲಿ ಯಲ್ಲಮ್ಮನಗುಡ್ಡಕ್ಕೆ 1,88,01,300 ಭಕ್ತರು ಭೇಟಿ ನೀಡಿದ್ದಾರೆ. 2024ರ ಜನವರಿ 1ರಿಂದ ಜೂನ್ 30ರವರೆಗೆ 56,25,500 ಭಕ್ತರು ಆಗಮಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಒಂದೂವರೆ ವರ್ಷದಲ್ಲಿ 2,44,26,800 ಪ್ರವಾಸಿಗರು ಗುಡ್ಡಕ್ಕೆ ಬಂದು ಹೋಗಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಬೆಳಗಾವಿ ಜಿಲ್ಲೆಗೆ 5.95 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಈ ಪೈಕಿ ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿದ್ದು 2.44 ಕೋಟಿಗೂ ಅಧಿಕ ಜನ. ಉಳಿದಂತೆ ಸವದತ್ತಿಯ ಜೋಗುಳಬಾವಿ ಸತ್ಯಮ್ಮನ ದೇವಸ್ಥಾನಕ್ಕೆ 1.54 ಕೋಟಿ, ಗೋಕಾಕ ಜಲಪಾತಕ್ಕೆ 17.27 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೇ ಈವರೆಗೆ 119 ವಿದೇಶಿಗರು ಆಗಮಿಸಿದ್ದು ವಿಶೇಷ.
ಸ್ವಚ್ಛತೆಗೆ ಆದ್ಯತೆ ನೀಡಿ: ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ದೇವಸ್ಥಾನ ಸುತ್ತಮುತ್ತಲೂ ಸ್ವಚ್ಛತೆ ಅಷ್ಟಕ್ಕಷ್ಟೇ. ಶೌಚಾಲಯ, ಕುಡಿಯುವ ನೀರು, ಭಕ್ತರು ಉಳಿದುಕೊಳ್ಳಲು ಯಾತ್ರಿ ನಿವಾಸಗಳು, ಸ್ವಚ್ಛತೆ ಕಾಪಾಡುವುದು, ಬಸ್ ಸೌಕರ್ಯ, ವ್ಯಾಪಾರಕ್ಕೆ ಮಳಿಗೆಗಳು ಸೇರಿ ಮತ್ತಿತರ ಸೌಕರ್ಯಗಳನ್ನು ಕಲ್ಪಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.
ರೈಲು ಮಾರ್ಗಕ್ಕೆ ಬೇಡಿಕೆ: ಯಲ್ಲಮ್ಮನ ಗುಡ್ಡಕ್ಕೆ ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಹಾಗಾಗಿ, ಬೆಳಗಾವಿ-ಸವದತ್ತಿ ಯಲ್ಲಮ್ಮನ ಗುಡ್ಡ-ಧಾರವಾಡ ರೈಲು ಮಾರ್ಗ ಆರಂಭಿಸಿದರೆ ಭಕ್ತರಿಗೆ ಅನುಕೂಲ ಆಗುತ್ತದೆ. ಕೇಂದ್ರದ ರೈಲ್ವೆ ಇಲಾಖೆ ಇತ್ತ ಗಮನಹರಿಸಬೇಕಿದೆ.
ಸ್ಥಳೀಯರಾದ ರಾಜು ಪಾಟೀಲ ಮಾತನಾಡಿ, "ಕರ್ನಾಟಕ ರಾಜ್ಯದಲ್ಲೇ ಹೆಚ್ಚು ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ. ಹಾಗಾಗಿ, ರಾಜ್ಯ ಸರ್ಕಾರ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕಿದೆ. ಶಾಸಕರು ಕೂಡ ಮುತುವರ್ಜಿ ವಹಿಸಿ ಪ್ರಾಧಿಕಾರ ರಚಿಸಿದ್ದು, ಭವಿಷ್ಯದಲ್ಲಿ ಯಲ್ಲಮ್ಮನ ಗುಡ್ಡ ಮತ್ತಷ್ಟು ಪ್ರಗತಿ ಹೊಂದಲಿ" ಎಂದು ಆಶಿಸಿದರು.
'ಈಟಿವಿ ಭಾರತ'ದ ಜೊತೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಸೌಮ್ಯಾ ಬಾಪಟ್, "ಪ್ರಾಧಿಕಾರದ ಮೂಲಕ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ. ಈಗಾಗಲೇ 11 ಕೋಟಿ ರೂ ಮೊತ್ತದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಲ್ಲದೇ ಕೇಂದ್ರ ಸರ್ಕಾರದ 50 ವರ್ಷಗಳವರೆಗೆ ಬಡ್ಡಿರಹಿತ ಸಾಲದ ಯೋಜನೆಯಡಿ 100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಿವರವಾದ ಯೋಜನಾ ವರದಿ ಸಿದ್ಧಪಡಿಸುತ್ತಿದ್ದೇವೆ. ಉಜ್ಜಯಿನಿ, ವಾರಣಾಸಿ, ಅಕ್ಷರಧಾಮ ಮಾದರಿಯಲ್ಲಿ ವಿಶ್ವ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿ ಇಟ್ಟುಕೊಂಡಿದ್ದೇವೆ" ಎಂದು ತಿಳಿಸಿದರು.
"ಯಲ್ಲಮ್ಮನಗುಡ್ಡ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದಲೇ ನಮ್ಮ ಸರ್ಕಾರ ಪ್ರಾಧಿಕಾರ ರಚಿಸಿದೆ. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲರು ಗುಡ್ಡದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಹಂತ–ಹಂತವಾಗಿ ನಾನಾ ಕಾಮಗಾರಿ ಕೈಗೊಂಡು, ಗುಡ್ಡವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಮೇಲ್ದರ್ಜೆಗೇರಿಸಲಾಗುವುದು. ಭಕ್ತರ ಅನುಕೂಲಕ್ಕಾಗಿ ಎಲ್ಲ ರೀತಿ ಕ್ರಮ ವಹಿಸಲಾಗುವುದು" ಎಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಹಂ.ಪ.ನಾಗರಾಜಯ್ಯ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ಮೈಸೂರು ದಸರಾ ಮಹೋತ್ಸವದ ಆಹ್ವಾನ - Mysuru Dasara Invitation