ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠ ಮುಳ್ಳಿನ ಗದ್ದುಗೆಯ ಪವಾಡದಿಂದಲೇ ಚಿರಪರಿಚಿತವಾಗಿದೆ. ಶಿವರಾತ್ರಿ ಮರುದಿನ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಮುಳ್ಳಿನ ಗದ್ದುಗೆಯ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಭಕ್ತರು ಮಠಕ್ಕಾಗಮಿಸುತ್ತಾರೆ.
ಹರನಹಳ್ಳಿ ಕೆಂಗಾಪುರದಲ್ಲಿ ಸ್ವಾಮೀಜಿ ಐದು ದಿನಗಳ ಕಾಲ ಉಪವಾಸ ಇದ್ದು, ಶಿವರಾತ್ರಿ ಮರುದಿನ ಮುಳ್ಳಿನ ಗದ್ದುಗೆ ಮೇಲೆ ನರ್ತನ ಮಾಡಿ ಪವಾಡ ಸೃಷ್ಟಿ ಮಾಡಿದ್ದಾರೆ. ಮುಳ್ಳಿನ ಗದ್ದಿಗೆ ಮೇಲೆ ನೃತ್ಯ ಮಾಡಿದರೂ ಕೂಡ ಶ್ರೀಗಳಿಗೆ ಏನೂ ಆಗದೇ ಇರುವುದು ಇಲ್ಲಿನ ಪವಾಡ.
ಭಕ್ತರ ಒಳಿತಿಗಾಗಿ ಐದು ದಿನಗಳ ಕಾಲ ಉಪವಾಸ ಇದ್ದು, ಗದ್ದುಗೆಯಲ್ಲಿ ನಿರ್ಮಾಣ ಮಾಡುವ ಮುಳ್ಳಿನ ಗದ್ದುಗೆ ಮೇಲೆ ಕೇವಲ ಬಾಳೆ ಎಲೆ ಹಾಸಿ ಅದರ ಮೇಲೆ ರಾಮಲಿಂಗೇಶ್ವರ ಸ್ವಾಮೀಜಿ ಕುಣಿದು, ಜಿಗಿದು ನರ್ತನವನ್ನು ಮಾಡುವುದೇ ಈ ಭಾಗದ ಬಹುದೊಡ್ಡ ಪವಾಡವಾಗಿದೆ. ಮುಳ್ಳಿನ ಗದ್ದುಗೆ ಮೇಲೆ ಜಿಗಿಯುವುದು, ನರ್ತಿಸಿದರು ಕೂಡ ಸ್ವಾಮೀಜಿಗೆ ಇಲ್ಲಿ ತನಕ ಯಾವುದೇ ಸಮಸ್ಯೆ ಆಗಿಲ್ಲ.
ಮಠದಿಂದ ಆರಂಭವಾಗಿ ಒಂದು ಕಿಮೀ ಜರುಗುವ ಮೆರವಣಿಯುದ್ದಕ್ಕೂ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳಿನ ಮೇಲೆ ಕೂತಿರುತ್ತಾರೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ಹಳ್ಳಿಯಲ್ಲದೇ ಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಿಂದ ಭಕ್ತರು ಆಗಮಿಸುತ್ತಾರೆ.
ಜೊತೆಗೆ, ಮುಳ್ಳು ಗದ್ದುಗೆಯ ಉತ್ಸವದ ಮೆರವಣಿಗೆ ಮುಗಿದಾದ ಬಳಿಕ ಗ್ರಾಮದ ಒಳಗೆ ತೆರಳಿ ಸ್ವಾಮೀಜಿ ಕಾರ್ಣಿಕವನ್ನು ನುಡಿಯುವುದು ಪ್ರತೀತಿ. ಇನ್ನು ಇಲ್ಲಿ ನುಡಿಯುವ ಕಾರ್ಣಿಕ ಈ ಭಾಗದ ಜನರಿಗೆ ಭವಿಷ್ಯವಾಣಿ ಆಗಿದೆ. ಮುಳ್ಳಿನ ಗದ್ದುಗೆ ಮೇಲೆ ಮೆರವಣಿಗೆ ಹೊರಟರೆ ಭಕ್ತರ ಪಾಪಗಳು ಕಳೆಯುತ್ತವೆ ಎಂಬುದು ಜನರ ನಂಬಿಕೆ.
ಕಾರ್ಣಿಕ ನುಡಿದ ರಾಮಲಿಂಗೇಶ್ವರ ಶ್ರೀ: ನಿನ್ನೆ ಜರುಗಿದ ಮುಳ್ಳಿನ ಗದ್ದುಗೆ ಉತ್ಸವದ ಬಳಿಕ ರಾಮಲಿಂಗೇಶ್ವರ ಶ್ರೀಯವರು ಕಾರ್ಣಿಕ ನುಡಿದಿದ್ದಾರೆ. 'ಕಾರ್ಮೋಡ ಕವಿದಿತ್ತು ಕೆರೆಕಟ್ಟೆಗಳು ತುಂಬಿದವೋ' ಎಂದು ವಿಶೇಷ ಅಚ್ಚರಿಯ ಕಾರ್ಣಿಕ ನುಡಿದಿದ್ದು, ಈ ಭಾಗದ ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಅಲ್ಲದೆ ಶ್ರೀಯವರು ಉತ್ಸವದ ಬಳಿ ಪ್ರತಿಬಾರಿ ನುಡಿಯುವ ಕಾರ್ಣಿಕ ಸತ್ಯವಾಗಿದೆ ಎಂಬುದು ಇಲ್ಲಿನ ಭಕ್ತರು ನಂಬಿಕೆ. "ನಾನು 45 ವರ್ಷಗಳಿಂದ ಇಲ್ಲಿನ ಭಕ್ತರಾಗಿದ್ದೇವೆ. ಕೆಲಸ, ಸಂತಾನ ಭಾಗ್ಯ, ಆರೋಗ್ಯ ಸಮಸ್ಯೆ ಹೀಗೆ ಪ್ರತಿಯೊಂದು ಸಮಸ್ಯೆ ಬಗೆಹರಿದಿವೆ. ವಿದ್ಯಾಭ್ಯಾಸ, ತಂದೆ-ತಾಯಿಗೆ ಆರೋಗ್ಯ ಸಮಸ್ಯೆ ನಿವಾರಣೆ ಜೊತೆಗೆ ಕೆಲಸ ಸಿಕ್ಕು ಒಳ್ಳೆಯದಾಗಿದೆ" ಎಂದು ಭಕ್ತರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಘಾರ: ಸಿದ್ಧಾರೂಢರ ಅದ್ಧೂರಿ ರಥೋತ್ಸವ