ಬೆಳಗಾವಿ: ಬೆಳಗಿನ ಜಾವ ಇಡ್ಲಿ ವ್ಯಾಪಾರ. ದಿನವಿಡೀ ಪಾನ್ ಶಾಪ್ ನಡೆಸೋದು. ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸೋದು ಇವರ ಹವ್ಯಾಸ. ದುಡಿಮೆಯೇ ದುಡ್ಡಿನ ತಾಯಿ ಎಂದು ನಂಬಿರುವ ಈ ಕಾಯಕ ಯೋಗಿಗೆ ದಿನದ 24 ಗಂಟೆ ಸಾಕಾಗುವುದಿಲ್ಲ. ದೇವರು ದುಡಿಯೋಕೆ ಶಕ್ತಿ ಕೊಟ್ಟಿದ್ದು, ಶಕ್ತಿ ಇರೋವರೆಗೂ ದುಡಿಯೋದೆ. ಶ್ರಮದ ದುಡಿಮೆಯಲ್ಲೇ ಸುಖ ಕಾಣುವುದು ಇವರ ಪಾಲಿಸಿ.
ದಿನಕ್ಕೆ 19 ಗಂಟೆ ಕೆಲಸ; ಕಷ್ಟ ಪಟ್ಟು ದುಡಿಯದೇ, ಬೆವರಿನ ಹನಿ ಬೀಳದೇ, ಬೆಳಗಾಗುವಷ್ಟರಲ್ಲಿ ಶ್ರೀಮಂತರಾಗಬೇಕು ಎನ್ನುವವರೇ ಹೆಚ್ಚು. ಆದರೆ, ಇಲ್ಲೊಬ್ಬ ಶ್ರಮಿಕ ಮಾತ್ರ ದುಡಿದು ಬದುಕೋಣ, ಕಷ್ಟಪಟ್ಟು ದುಡಿದು ಆರ್ಥಿಕ ಸಬಲತೆ ಸಾಧಿಸೋಣ ಎಂದು ಛಲ ತೊಟ್ಟಿದ್ದಾರೆ. ದಿನಕ್ಕೆ ಐದು ಗಂಟೆ ಮಾತ್ರ ನಿದ್ದೆ ಮಾಡಿ, 19 ಗಂಟೆ ದುಡಿಯುತ್ತಿದ್ದಾರೆ. ದಿನವಿಡೀ ಕೆಲಸ ಮಾಡುವ ಇವರನ್ನು ನೋಡಿದ ಜನ ಬೇಷ್ ಎನ್ನುತ್ತಿದ್ದಾರೆ.
ಹೌದು, ಮೂಲತಃ ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಎಂಬ ಗ್ರಾಮದವರಾದ ವಸಂತ ವೆಂಕಪ್ಪ ನಾಯಿಕ ಅವರೇ ನಾವು ಹೇಳುತ್ತಿರುವ ದುಡಿಮೆಗೆ ದೊಡ್ಡಪ್ಪನಾಗಿರುವ ವ್ಯಕ್ತಿಯ ಕಥೆ. ಉದ್ಯೋಗ ಅರಸಿ ಬೆಳಗಾವಿಗೆ ಬಂದಿರುವ ವಸಂತ, ಕಳೆದ 10 ವರ್ಷ ಬೇರೆಯವರ ಕೈ ಕೆಳಗೆ ಕೆಲಸ ಮಾಡಿದ್ದು, ಕೆಲವು ವರ್ಷಗಳಿಂದ ಸ್ವಂತ ವ್ಯಾಪಾರ ನಡೆಸುತ್ತಿದ್ದಾರೆ.
ಬೆಳಗಾವಿ ನಗರದ ಮಹಾದ್ವಾರ ರಸ್ತೆಯಲ್ಲಿ ಪಾನ್ ಶಾಪ್ ಹೊಂದಿದ್ದಾರೆ. ಇದರ ಜೊತೆಗೆ ಮನೆಯಿಂದಲೇ ಇಡ್ಲಿ ವ್ಯಾಪಾರ ಶುರುವಾಗಿದೆ. ಬೆಳಗಿನ ಜಾವ 4:30 ರಿಂದ 8 ಗಂಟೆ ವರೆಗೆ ಸುತ್ತಲಿನ ಕ್ಯಾಂಟೀನ್ಗಳಿಗೆ ಇಡ್ಲಿ ಸಪ್ಲೈ ಮಾಡುತ್ತಾರೆ. ಪ್ರತಿದಿನ ಏನಿಲ್ಲವೆಂದರೂ 400 ಇಡ್ಲಿ ಮಾರುತ್ತಾರೆ. ಆ ಬಳಿಕ 9 ಗಂಟೆಗೆ ಹೋಗಿ ಪಾನ್ ಶಾಪ್ ವ್ಯಾಪಾರ ಶುರುವಾಗುತ್ತದೆ. ಇದಷ್ಟೇ ಆಗಿದ್ದರೆ, ಮುಗಿದು ಬಿಡುತ್ತಿತ್ತು. ಈ ಒತ್ತಡದ ಕೆಲಸದ ನಡುವೆ ಈಗ ಗಣೇಶೋತ್ಸವ ಹಿನ್ನೆಲೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿದ್ದಾರೆ. ದುಡಿದು ಬದುಕಬೇಕು ಎನ್ನುವ ವಸಂತ ಅವರ ಬದುಕು ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
ಬದುಕಿನ ಬಂಡಿ ಓಡಲು ದುಡಿ: ಈಟಿವಿ ಭಾರತ ಜೊತೆ ಮಾತನಾಡಿದ ವಸಂತ ನಾಯಿಕ, ದೇವರು ದುಡಿಯಲು ಶಕ್ತಿ ಕೊಟ್ಟಿದ್ದಾನೆ. ಪ್ರತಿಯೊಬ್ಬರು ದುಡಿಯುವುದನ್ನು ರೂಢಿಸಿಕೊಳ್ಳಬೇಕು. ದುಡಿಯದಿದ್ದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಈ ದುಬಾರಿ ದುನಿಯಾದಲ್ಲಿ ದುಡಿದರೆ ಮಾತ್ರ ಬದುಕಿನ ಬಂಡಿ ಓಡಿಸಲು ಸಾಧ್ಯ. ಇಲ್ಲದಿದ್ದರೆ ಬಂಡಿ ಬಿದ್ದು ಬಿಡುತ್ತದೆ. ಹಾಗಾಗಿ, ಶ್ರಮ ಪಟ್ಟರೆ ಮಾತ್ರ ಸುಖ ಸಿಗುತ್ತದೆ ಎಂದು ಬದುಕಿನ ಗುಟ್ಟನ್ನು ತಿಳಿಸಿದರು.
ಇದು ದೈವದತ್ತ ಕಲೆ: ಕಳೆದ ಆರು ವರ್ಷಗಳಿಂದ ಗಣೇಶ ಮೂರ್ತಿ ಮಾಡುತ್ತಿದ್ದೇನೆ. ಪರಿಚಯದವರು, ಸ್ನೇಹಿತರಿಗೆ ಸೇರಿ ಸುಮಾರು 30 ಮೂರ್ತಿ ತಯಾರಿಸುತ್ತೇನೆ. ಇದು ನನಗೆ ವ್ಯಾಪಾರ ಅಲ್ಲ, ಹವ್ಯಾಸ. ಬೆಳಗಾವಿಯಲ್ಲಿ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಬೆಲೆ ಇಲ್ಲ. ಪಿಒಪಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ, ನನ್ನ ಬಳಿ ಬಂದು ಕೇಳುವ ಸಂಪ್ರದಾಯಸ್ಥರಿಗೆ ಮಾತ್ರ ಮಣ್ಣಿನ ಮೂರ್ತಿ ಮಾಡಿ ಕೊಡುತ್ತಿದ್ದೇನೆ. ನನ್ನ ತಾಯಿಯವರ ತವರು ಮನೆಯಲ್ಲಿ ಅಜ್ಜ, ಮಾವ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಾರೆ. ಈ ಕಲೆ ನನಗೂ ದೈವದತ್ತವಾಗಿ ಬಂದಿದೆ. ಅವರು ಮಾಡುವುದನ್ನು ನೋಡಿ ಕಲಿತು, ಶ್ರಮಪಟ್ಟು ಈ ಕಲೆ ಬೆಳೆಸಿಕೊಂಡಿದ್ದೇನೆ. ಈಗ ಬೆಳಗಾವಿಯಲ್ಲಿ ಮುಂದುವರಿಸಿದ್ದೇನೆ ಎಂದು ತಿಳಿಸಿದರು.
ಅರ್ಧಾಂಗಿ ಅರ್ಧ ಕೆಲಸ: ನನಗೆ ಪತ್ನಿ ಸುಮತಿ, ಪುತ್ರಿ ಮೇಘಾ, ಪುತ್ರ ಓಂಕಾರ ಸಹಕಾರ ಇದೆ. ಅವರೇ ನನ್ನ ಹಿಂದಿನ ದೊಡ್ಡ ಶಕ್ತಿ. ನನ್ನ ಅರ್ಧಾಂಗಿ ಅರ್ಧ ಕೆಲಸ ಮಾಡುತ್ತಾರೆ. ಇಡ್ಲಿಗೆ ಹಿಟ್ಟು ರುಬ್ಬಿ, ಎಲ್ಲ ತಯಾರಿ ಮಾಡಿಕೊಳ್ಳುತ್ತಾರೆ. ಸದ್ಯ ಪ್ರತಿದಿನ 400 ಇಡ್ಲಿ ಮಾರುತ್ತಿದ್ದೇನೆ. ಕ್ಯಾಂಟೀನ್ಗಳಿಗೆ ಇಡ್ಲಿ ಕೊಡುತ್ತೇವೆ. ಮುಂದೆ ದೇವರ ದಯೆಯಿಂದ ಇದನ್ನು ಮತ್ತಷ್ಟು ದೊಡ್ಡದು ಮಾಡುವ ಆಲೋಚನೆ ಇಟ್ಟುಕೊಂಡಿದ್ದೇನೆ ಎಂದರು.
ಹ್ಯಾಪಿ ಆಗಿದ್ದೇನೆ: ಮನೆ, ಅಂಗಡಿ ಬಾಡಿಗೆ ಇದೆ. ಇಬ್ಬರು ಮಕ್ಕಳ ಶಾಲಾ, ಕಾಲೇಜು ವೆಚ್ಚ ನೋಡಿಕೊಂಡು, ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಕಷ್ಟಪಟ್ಟು ದುಡಿದು ಕುಟುಂಬದೊಂದಿಗೆ ಹ್ಯಾಪಿ ಆಗಿದ್ದೇನೆ. ದುಶ್ಚಟಗಳಿಗೆ ದಾಸರಾಗಬೇಡಿ. ಸುಸಂಸ್ಕೃತವಾಗಿ ಬೆಳೆಯಿರಿ. ದಿನನಿತ್ಯ ಕಷ್ಟಪಟ್ಟು ದುಡಿದು ತಂದೆ-ತಾಯಿ, ಪತ್ನಿ-ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ದುಡಿಯದೇ ಮೈಗಳ್ಳತನ ಮಾಡಿದರೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿಲ್ಲ ಎಂದು ಇಂದಿನ ಯುವ ಜನತೆಗೆ ಕಿವಿಮಾತು ಹೇಳಿದರು.
ಪತ್ನಿಗೆ ಹೆಮ್ಮೆಯ ಯಜಮಾನ್ರು; ವಸಂತ ಪತ್ನಿ ಸುಮತಿ ನಾಯಿಕ ಮಾತನಾಡಿ, ನಮ್ಮ ಯಜಮಾನರ ಕೆಲಸದ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ಇಂಥ ಗಂಡ ಸಿಕ್ಕಿದ್ದು ನನ್ನ ಪುಣ್ಯ. ಇಡ್ಲಿ ತಯಾರಿಸಲು ಮತ್ತು ಗಣೇಶ ಮೂರ್ತಿ ಮಾಡಲು ನಾನು ಮತ್ತು ಇಬ್ಬರು ಮಕ್ಕಳು ಕೂಡ ಅವರಿಗೆ ಸಹಾಯ ಮಾಡುತ್ತೇವೆ. ಕಷ್ಟಪಟ್ಟು ದುಡಿದು ನಾವೆಲ್ಲಾ ಖುಷಿಯಿಂದ ಇದ್ದೇವೆ ಎಂದು ಹೇಳಿದರು.
ಸ್ಥಳೀಯ ನಿವಾಸಿ ವಿರೇಂದ್ರ ಗೋಬರಿ ಮಾತನಾಡಿ, ವಸಂತ ನಾಯಿಕ ಅವರನ್ನು ಚಿಕ್ಕಂದಿನಿಂದ ನೋಡುತ್ತಿದ್ದೇನೆ. ಅವರ ಜೀವನ ಇಂದಿನ ಯುವಕರಿಗೆ, ಇಡೀ ಮಾನವಕುಲಕ್ಕೆ ಮಾದರಿ, ಮಿಸ್ಟರ್ ಪರ್ಪೆಕ್ಟ್ ವ್ಯಕ್ತಿತ್ವ. ಆರು ವರ್ಷಗಳಿಂದ ಅವರ ಬಳಿಯೇ ನಾವೂ ಮಣ್ಣಿನ ಗಣೇಶ ಮೂರ್ತಿ ಖರೀದಿಸುತ್ತಿದ್ದೇನೆ. ಅವರೊಬ್ಬ ಕಾಯಕಯೋಗಿ ಹೇಗೋ, ಓರ್ವ ಅದ್ಭುತ ಕ್ರಿಕೆಟ್ ಆಟಗಾರ ಕೂಡ ಹೌದು. ನಮ್ಮ ಜೊತೆ ಮೊದಲೆಲ್ಲಾ ಆಡಿದ್ದಾರೆ. ಈಗ ಇಡ್ಲಿ ವ್ಯಾಪಾರ ಶುರು ಮಾಡಿದ್ದರಿಂದ ಬರುತ್ತಿಲ್ಲ ಎಂದರು.
ಇದನ್ನೂ ಓದಿ: ಹಾವೇರಿಯ ಮಾರುಕಟ್ಟೆಗಳಲ್ಲಿ ದೇವಗಿರಿ ಗ್ರಾಮದ ಕಲಾವಿದರ ಗಣೇಶ ಮೂರ್ತಿಗಳ ಆಕರ್ಷಣೆ - Haveri Ganesh Chaturthi Preparation