ಚಾಮರಾಜನಗರ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಸುಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ರಾಮಫಲ ವೃಕ್ಷವೊಂದು 20 ವರ್ಷದ ಬಳಿಕ ಫಲ ಕೊಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ಸುರೇಶ್ ಋಗ್ವೇದಿ ಎಂಬವರ ಮನೆಯ ಆವರಣದಲ್ಲಿ ಎರಡು ದಶಕಗಳ ಹಿಂದೆ ರಾಮಫಲ ಗಿಡ ನೆಡಲಾಗಿತ್ತು. ಆದರೆ, ಫಲ ಕೊಟ್ಟಿರಲಿಲ್ಲ. ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸಮಯದಲ್ಲೇ ಕಾಕತಾಳೀಯ ಎಂಬಂತೆ ರಾಮಫಲ ವೃಕ್ಷವು 5ರಿಂದ 6 ಹಣ್ಣುಗಳನ್ನು ಬಿಟ್ಟಿರುವುದು ಮನೆಯವರಿಗೆ ಅಚ್ಚರಿ ಉಂಟುಮಾಡಿದೆ.
ರಾಮ ದೇವರು ತಮಗೆ ಆಶೀರ್ವಾದ ಮಾಡಿದ್ದಾರೆಂದು ಕುಟುಂಬಸ್ಥರು ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದ್ದಾರೆ. ಶತಮಾನಗಳ ಕನಸು ನನಸಾಗುತ್ತಿರುವ ಸಮಯದಲ್ಲೇ ರಾಮಫಲ ಕೊಟ್ಟಿರುವುದು ಸಂತಸ ತಂದಿದೆ ಎಂದು ನಿವಾಸಿ ಸುರೇಶ್ ಋಗ್ವೇದಿ ಪ್ರತಿಕ್ರಿಯಿಸಿದರು. ''ರಾಮಫಲ ವೃಕ್ಷವನ್ನು 20 ವರ್ಷಗಳ ಹಿಂದೆ ನಡೆಲಾಗಿತ್ತು. ಎರಡು ದಶಕ ಕಳೆದ ನಂತರ, ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುವ ಸಮಯದಲ್ಲೇ ನಮ್ಮ ಋಗ್ವೇದಿ ಕುಟೀರದಲ್ಲಿ ಈ ಮರ ರಾಮಫಲ ನೀಡಿರುವುದರಿಂದ ನಮಗೆಲ್ಲರಿಗೂ ಖುಷಿ ಲಭಿಸಿದೆ. ರಾಮ ಫಲ, ಸೀತಾ ಫಲ, ಲಕ್ಷ್ಮಣ ಫಲ, ಹನುಮ ಫಲಗಳಂತ ಸಂಪನ್ಮೂಲಗಳು ಹಾಗೂ ಪ್ರೀತಿ, ವಿಶ್ವಾಸ ಮತ್ತು ಮಾನವೀಯ ಮೌಲ್ಯಗಳು, ರಾಮನ ಆದರ್ಶಗಳು ಎಲ್ಲರಲ್ಲೂ ಅರಳಲಿ'' ಎಂದು ಆಶಿಸಿದರು.
''ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಮ್ಮ ತುಂಬಾ ಸಂತೋಷ, ಆನಂದ ತಂದಿದೆ. ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರು ಭಾರತೀಯ ಸಂಸ್ಕೃತಿ, ಪರಂಪರೆಯ ಆಧಾರಸ್ತಂಭಗಳಾಗಿದ್ದಾರೆ. ಇವೆರಡು ಶಕ್ತಿಗಳು ಪ್ರಜ್ವಲಿಸಲಿ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ 'ಯಜಮಾನ'ರಾಗಿ 14 ದಂಪತಿಗಳು ಭಾಗಿ, ಕನ್ನಡಿಗರಿಗೂ ಅವಕಾಶ