ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತಾದಿಗಳಿಗೆ ಮಾರ್ಚ್ 3ರಿಂದ 10ರವರೆಗೆ ಅರಣ್ಯ ಇಲಾಖೆ ಅವಕಾಶ ನೀಡಿದೆ. ಈ 7 ದಿನಗಳವರೆಗೆ ಪ್ರತಿದಿನ ಬೆಳಗ್ಗೆ 6.30ರಿಂದ ಬೆಳಿಗ್ಗೆ 10.30 ಗಂಟೆಯೊಳಗೆ ಕಾಲ್ನಡಿಗೆ ಮೂಲಕ ಹೋಗಲು ತಿಳಿಸಲಾಗಿದೆ.

ರಾಜ್ಯಾದ್ಯಂತ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೇ ಟ್ರಕ್ಕಿಂಗ್ (ಚಾರಣ) ಮಾಡುವುದನ್ನು ನಿಷೇಧಿಸಿ ಅರಣ್ಯ ಸಚಿವರು ಈ ಹಿಂದೆ ಆದೇಶ ಹೊರಡಿಸಿದ್ದರು. ಸಚಿವರ ಆದೇಶದಂತೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿಯೂ ಸಹ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಭಾಗ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದಿಂದ ನಾಗಮಲೆಗೆ ತೆರಳಲು ಆನ್‌ಲೈನ್ ಮೂಲಕ ನೋಂದಾಯಿಸಿ ನಂತರ ನಾಗಮಲೆಗೆ ತೆರಳಬೇಕಾಗಿತ್ತು. ಆದರೆ, ಮಾರ್ಚ್ 8ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಇರುವುದರಿಂದ ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ತೊಂದರೆಯಾಗುವ ಸಾಧ್ಯತೆ ಪರಿಗಣಿಸಿ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಒದಗಿಸಲಾಗಿದೆ.

ಬೆಳಿಗ್ಗೆ 6.30ರಿಂದ ಬೆಳಗ್ಗೆ 10.30ರವರೆಗೆ ನಾಲ್ಕು ಗಂಟೆಯೊಳಗೆ ನಾಗಮಲೆಗೆ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ನೀಡಲಾಗಿದೆ. ನಂತರ ನಾಗಮಲೆನಿಂದ ವಾಪಸ್ ಸಂಜೆ 5.30 ಗಂಟೆಯೊಳಗೆ ಕಡ್ಡಾಯವಾಗಿ ಭಕ್ತಾದಿಗಳು ಮಹದೇಶ್ವರ ಬೆಟ್ಟಕ್ಕೆ ಹಿಂತಿರುಗಬೇಕಾಗುತ್ತದೆ. ಯಾವುದೇ ರೀತಿಯ ವಾಹನಗಳಲ್ಲಿ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯದೊಳಗೆ ಹಾಕುವುದಕ್ಕೂ ನಿಷೇಧಿಸ ಹೇರಲಾಗಿದೆ. ಇದಕ್ಕೆ ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ.ಸಂತೋಷ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಮಾಹಿತಿ- ₹1.82 ಕೋಟಿ ಸಂಗ್ರಹ: ಹನೂರು ತಾಲೂಕಿನ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.1ರಂದು ನಡೆದಿದ್ದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 28 ದಿನಗಳ ಅವಧಿಯಲ್ಲಿ 1.82 ಕೋಟಿ ರೂ. ಸಂಗ್ರಹವಾಗಿತ್ತು.
''ಬೆಟ್ಟದ ಬಸ್ ನಿಲ್ದಾಣದ ಹತ್ತಿರದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ (ಫೆ.1ರಂದು) ಬೆಳಗ್ಗೆ 8 ಗಂಟೆಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇವರ ಹುಂಡಿಗಳನ್ನು ತೆರೆಯಲಾಗಿತ್ತು. ನಂತರ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭವಾಗಿತ್ತು. ಎಣಿಕೆ ಕಾರ್ಯವು ಆ ದಿನ ಸಂಜೆ 7.40 ಗಂಟೆವರೆಗೆ ನಡೆದಿತ್ತು. 28 ದಿನಗಳ ಅವಧಿಯಲ್ಲಿ 1,82,33,071 ರೂ. ಹುಂಡಿ ಸಂಗ್ರಹವಾಗಿತ್ತು'' ಎಂದು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದರು.
ಇದನ್ನೂ ಓದಿ: ದೇವರಬೆಳಕೆರೆ ಮೈಲಾರಲಿಂಗೇಶ್ವರ ಜಾತ್ರೆ: ಸರಪಳಿ ಪವಾಡ ಕಣ್ತುಂಬಿಕೊಂಡ ಭಕ್ತರು