ಹುಬ್ಬಳ್ಳಿ: ಶೀಗಿಹುಣ್ಣಿಮೆಯ ಪ್ರಯುಕ್ತ ಸವದತ್ತಿ ಶ್ರೀ ರೇಣುಕಾ ದೇವಿಯ ದರ್ಶನಕ್ಕಾಗಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಕ್ಟೋಬರ್ 17 ಗುರುವಾರ ಹಾಗೂ 18 ಶುಕ್ರವಾರದಂದು ಹುಬ್ಬಳ್ಳಿ ಮತ್ತು ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ್ ತಿಳಿಸಿದರು.
ಪ್ರತಿ ವರ್ಷ ಶೀಗಿ ಹುಣ್ಣಿಮೆಯ ದಿನ ಹುಬ್ಬಳ್ಳಿ, ನವಲಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸವದತ್ತಿಯ ರೇಣುಕಾ ದೇವಿಯ ದರ್ಶನಕ್ಕಾಗಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗಿಬರುತ್ತಾರೆ. ಈ ಬಾರಿ ಅಕ್ಟೋಬರ್ 17ರಂದು ಗುರುವಾರ ಶೀಗಿ ಹುಣ್ಣಿಮೆ ಹಾಗೂ 18ರಂದು ಶುಕ್ರವಾರ ದೇವಿಯ ವಾರದ ನಿಮಿತ್ತ ಹೆಚ್ಚಿನ ಜನರ ಸಂಚಾರ ನಿರೀಕ್ಷಿಸಲಾಗಿದೆ.
ಈ ಅವಧಿಯಲ್ಲಿ ದೇವಿಯ ದರ್ಶನಕ್ಕೆ ಹೋಗಿ ಬರುವ ಭಕ್ತಾಧಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ಹಾಗೂ ನವಲಗುಂದದಿಂದ ನೇರವಾಗಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ವಿಶೇಷ ಬಸ್ಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ-ಯಲ್ಲಮ್ಮನ ಗುಡ್ಡ: ಈ ಬಸ್ಗಳು ಧಾರವಾಡ, ಅಮ್ಮಿನಭಾವಿ, ಸವದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.
ನವಲಗುಂದ - ಯಲ್ಲಮ್ಮನ ಗುಡ್ಡದ ಈ ಬಸ್ಗಳು ನವಲಗುಂದ ಬಸ್ ನಿಲ್ದಾಣದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.
ಇದನ್ನೂ ಓದಿ: ಕೋಟ್ಯಂತರ ಭಕ್ತರ ಆರಾಧ್ಯ ದೇವತೆ ಸವದತ್ತಿಯ ಯಲ್ಲಮ್ಮ: ಗುಡ್ದದಲ್ಲಿ ಪ್ರವಾಸೋದ್ಯಮಕ್ಕೆ ಬೇಕಿದೆ ಉತ್ತೇಜನ - Savadatti Yallamma