ಬೆಂಗಳೂರು: "ಶಾಸಕರು ಪದೇಪದೇ ಮನಸ್ಸಿಗೆ ಬಂದಂತೆ ಎದ್ದುನಿಂತು ಮಾತನಾಡುವುದು ಸರಿಯಲ್ಲ" ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಸಮಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಕಲಾಪದಲ್ಲಿ ಇಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇಪದೇ ಎದ್ದುನಿಂತು ಪ್ರತಿಕ್ರಿಯಿಸುತ್ತಿದ್ದರು. ಈ ಸಂದರ್ಭದಲ್ಲಿ "ನಿಮ್ಮ ಕುರ್ಚಿಯ ಸ್ಥಳದ ಮಹಿಮೆ ಇರಬಹುದು. ಪದೇ ಪದೇ ಚರ್ಚೆಗೆ ಅಡ್ಡಿಪಡಿಸುತ್ತಿದ್ದೀರ. ನಿಮ್ಮ ಸ್ಥಾನವನ್ನು ಬದಲಾಯಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಮಾತನಾಡಿ, "ಬಿಜೆಪಿಯವರು ತಮ್ಮ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಈಗ ಪ್ರಸ್ತಾಪಿಸಿ, ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವುದು ಸರಿಯಲ್ಲ. ಅವರು ಅಧಿಕಾರದಲ್ಲಿದ್ದಾಗ ಏಕೆ ಸುಮ್ಮನಿದ್ದರು?" ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು, "ಮಹದೇವಪ್ಪ ಅವರ ಮಾತುಗಳಿಗೆ ನನ್ನ ಬೆಂಬಲ ಇದೆ. ಸರ್ಕಾರದ ಪರವಾಗಿ ಸಚಿವರಾದ ದಿನೇಶ್ ಗುಂಡೂರಾವ್, ಮಹದೇವಪ್ಪ ಅವರೇ ಉತ್ತರ ಕೊಟ್ಟು ಬಿಡಲಿ. ಪ್ರತಿಪಕ್ಷದವರು ನಾವು ಮಾತನ್ನೇ ಆಡುವುದಿಲ್ಲ" ಎಂದು ಮೂದಲಿಸಿದರು.
ವಕೀಲರ ಪ್ರಸಂಗ: ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು, "ನ್ಯಾಯಾಲಯದಲ್ಲಿ ಕಾವೇರಿದ ವಾದ ನಡೆಯುವಾಗ ವಕೀಲರು ಪರಸ್ಪರ ಫೂಲ್ ಹಾಗೂ ಈಡಿಯಟ್ ಎಂದು ನಿಂದಿಸಿಕೊಳ್ಳುತ್ತಾರೆ. ನ್ಯಾಯಾಧೀಶರು ಈಗ ಇಬ್ಬರಿಗೂ ಪರಸ್ಪರ ಪರಿಚಯವಾಗಿದೆ. ಇನ್ನು ಮುಂದೆ ವಾದ ಮಾಡಿ ಎಂದು ಹೇಳುತ್ತಾರೆ" ಎಂದು ಪ್ರಸಂಗವೊಂದನ್ನು ಉಲ್ಲೇಖಿಸಿದರು.
ಇಡೀ ದಿನದ ಚರ್ಚೆಯಲ್ಲಿ ಆಡಳಿತ ಪಕ್ಷದ ಶಾಸಕರು, ಸಚಿವರು ಪ್ರತಿಪಕ್ಷದ ನಾಯಕರ ವಿರುದ್ಧ ಮುಗಿಬಿದ್ದರು. ಪ್ರತಿಯೊಬ್ಬರು ಮಾತನಾಡುವಾಗಲೂ ಪದೇಪದೇ ಅಡ್ಡಿ ಆಕ್ಷೇಪಗಳು ವ್ಯಕ್ತವಾಗುತ್ತಲೇ ಇದ್ದವು. ಅದನ್ನು ನಿಯಂತ್ರಿಸಲು ಸಭಾಧ್ಯಕ್ಷರು ಹರಸಾಹಸ ಪಡಬೇಕಾಯಿತು.
ಸಚಿವರಾದ ದಿನೇಶ್ ಗುಂಡರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಅವರು ಬಿಜೆಪಿ ನಾಯಕರ ಚರ್ಚೆಗಳಿಗೆ ಅಂಕಿ ಅಂಶಗಳೊಂದಿಗೆ ಎದುರೇಟು ನೀಡುತ್ತಿದ್ದರು. ಇದರಿಂದ ಅಸಹನೆಗೊಂಡ ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಮೂವರು ಸಚಿವರ ಸ್ಥಾನಗಳನ್ನು ಬೇರೆ ಕಡೆಗೆ ಬದಲಾಯಿಸಿ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಸದನದಲ್ಲಿ ಸಚಿವರ ಗೈರು: ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಸದಸ್ಯರು - Opposition Members walkout