ದಾವಣಗೆರೆ : ಚನ್ನಗಿರಿಯಲ್ಲಿ ಆದಿಲ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿತನಕ ನಮ್ಮ ಸ್ಥಳೀಯ ಪೊಲೀಸರು ತನಿಖೆ ಮಾಡಿದ್ದಾರೆ. ನಂತರ ಈ ಪ್ರಕರಣ ಸಿಐಡಿಗೆ ವರ್ಗಾವಣೆ ಆಗಲಿದೆ. ಅವರು ತನಿಖೆ ಮಾಡಲಿದ್ದಾರೆ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ ಹಾಗೂ ಆದಿಲ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ. ಸಿಐಡಿಗೆ ವರ್ಗಾವಣೆ ಬಗ್ಗೆ ಪ್ರಕ್ರಿಯೆಗಳು ನಡೆದಿದ್ದು, ಪ್ರಕರಣ ವರ್ಗಾವಣೆಯಾಗಲಿದೆ ಎಂದರು.
ಇದುವರೆಗೂ ಘಟನೆಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತರ ಮೇಲೆ ಯಾವುದೇ ಹಳೆ ಕೇಸ್ಗಳಿಲ್ಲ. ಗುಂಪಿನಲ್ಲಿ ಕೆಲ ಯುವಕರು ದುರ್ವರ್ತನೆ ತೋರಿದ್ದಾರೆ. ಬಂಧಿತರು ಚನ್ನಗಿರಿ ಟೌನ್ ಮತ್ತು ಚನ್ನಗಿರಿ ತಾಲೂಕಿನ ಹೊನ್ನೇಬಾಗಿ, ನಲ್ಲೂರು ಸೇರಿದಂತೆ ವಿವಿಧ ಹಳ್ಳಿಗಳಿಂದ ಬಂದಿದ್ದಾರೆ ಎಂದು ತಿಳಿಸಿದರು.
ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಆದಿಲ್ ಸಾವು ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನೂ ವರದಿ ನಮ್ಮ ಕೈ ಸೇರಿಲ್ಲ. ಇನ್ನೆರಡು ದಿನಗಳಲ್ಲಿ ಮರಣೋತ್ತರ ಪರೀಕ್ಷಾ ವರದಿ ಬರುವ ಸಾಧ್ಯತೆ ಇದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಇದನ್ನೂ ಓದಿ : ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಪ್ರಕರಣ: 25 ಆರೋಪಿಗಳನ್ನು ಬಂಧಿಸಿದ ಪೊಲೀಸರು - Police Station Vandalism Case