ಚಾಮರಾಜನಗರ: ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಂದು ಫೀಲ್ಡಿಗಿಳಿದ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ, ಹೆಲ್ಮೆಟ್ ಹಾಕದೇ ಬೈಕ್ ಚಲಾಯಿಸುತ್ತಿದ್ದವರಿಗೆ ಅಪಘಾತಗಳ ವಿಡಿಯೋ ತೋರಿಸಿ ಎಚ್ಚರಿಕೆಯ ಪಾಠ ಮಾಡಿದರು.
ಚಾಮರಾಜನಗರ ಭುವನೇಶ್ವರಿ ವೃತ್ತದಲ್ಲಿಂದು ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹೆಲ್ಮೆಟ್ ಹಾಕದೇ ಮಕ್ಕಳನ್ನು ಕೂರಿಸಿಕೊಂಡು ತೆರಳುತ್ತಿದ್ದ ಪಾಲಕರು, ಆಸ್ಪತ್ರೆಗೆ ತೆರಳುತ್ತಿದ್ದವರು, ಯುವಕರನ್ನು ತರಾಟೆಗೆ ತೆಗೆದುಕೊಂಡು ವಾಹನ ಚಾಲನೆಯಲ್ಲಿ ಹೆಲ್ಮೆಟ್ ಏಕೆ ಮುಖ್ಯ ಎಂದು ವಿವರಿಸಿ, ಜೀವದ ಬೆಲೆ ಬಗ್ಗೆ ಕ್ಲಾಸ್ ತೆಗೆದುಕೊಂಡರು.
ಭುವನೇಶ್ವರಿ ವೃತ್ತದಲ್ಲಿ ಹೆಲ್ಮೆಟ್ ಹಾಕದೇ ಬಂದಿದ್ದ ದಂಪತಿ, ಪಾಲಕರಿಗೆ ಜಿಲ್ಲೆಯಲ್ಲೇ ಉಂಟಾದ ಅಪಘಾತದ ದೃಶ್ಯ ತೋರಿಸಿ, ಹೆಲ್ಮೆಟ್ ಹಾಕದಿದ್ದರಿಂದ ಅಸುನೀಗಿದ ದೃಶ್ಯಗಳನ್ನು ತೋರಿಸಿದರು. ಹತ್ತಾರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕಿಕೊಂಡ ಬಳಿಕವೇ ಪೊಲೀಸರು ಬೈಕ್ ಕೊಟ್ಟು ಕಳುಹಿಸಿದರು.
ಗುಂಡ್ಲುಪೇಟೆಯಲ್ಲೂ ಹೆಲ್ಮೆಟ್ ಜಾಗೃತಿ ಮೂಡಿಸಿದ ಎಸ್ಪಿ, ಭಾನುವಾರ ತಡರಾತ್ರಿ ಟೆಂಪೋಗೆ ಡಿಕ್ಕಿ ಹೊಡೆದು ಪಟ್ಟಣದ ಹೋಂಡಾ ಶೋ ರೂಂ ಬಳಿ ಗ್ರಾ.ಪಂ ಬಿಲ್ ಕಲೆಕ್ಟರ್ ಅಸುನೀಗಿದ್ದ ಸ್ಥಳದಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಿದರು.
ಹೆಲ್ಮೆಟ್ ಹಾಕದೇ ಬಂದ ಸವಾರರಿಗೆ ಅಪಘಾತ ಉಂಟಾದ ಸ್ಥಳದಲ್ಲೇ ಪಾಠ ಮಾಡಿ ಹೆಲ್ಮೆಟ್ ಹಾಕಿದ್ದರೆ ಬದುಕಬಹುದಾದ ಸಾಧ್ಯತೆ ಎಷ್ಟಿತ್ತು ಎಂಬುದನ್ನು ವಿವರಿಸಿದರು.
ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಗುಲಾಬಿ, ಇಲ್ಲದಿದ್ರೆ ದಂಡದ ರಶೀದಿ; ಸಾವು ತಡೆಯಲು ಹಾವೇರಿ ಎಸ್ಪಿ ಜಾಗೃತಿ