ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಮಣ್ಣಿನಡಿ ಸಿಲುಕಿ ದಾರುಣ ಸಾವು ಕಂಡ ಲಕ್ಷಣ ನಾಯ್ಕ ಕುಟುಂಬದ ಸಾವಿನಿಂದ ಕಂಗಾಲಾಗಿದ್ದ ಶ್ವಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಆಸರೆ ಕಲ್ಪಿಸಿದ್ದಾರೆ.
ಜುಲೈ 16ರಂದು ಶಿರೂರಿನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಲಕ್ಷ್ಮಣ ಹಾಗೂ ಶಾಂತಿ ದಂಪತಿ ಮತ್ತು ಮಕ್ಕಳಾದ ರೋಷನ್, ಆವಂತಿಕಾ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದರು. ಲಕ್ಷ್ಮಣ ನಾಯ್ಕ ಅವರು ಸಾಕಿದ ಶ್ವಾನ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿತ್ತು. ಕಣ್ಣೆದುರೇ ನಡೆದ ಭಯಾನಕ ಘಟನೆಯಿಂದ ಮರುಕದಲ್ಲಿದ್ದ ಈ ಶ್ವಾನ, ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳದಲ್ಲೇ ಇದ್ದು ತನ್ನವರಿಗಾಗಿ ಹಪಹಪಿಸುತ್ತಿತ್ತು.
ಶ್ವಾನದ ಮೂಕರೋದನೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಮುಳುಗುತಜ್ಞ ಈಶ್ವರ ಮಲ್ಪೆ ಸೇರಿದಂತೆ ಹಲವರಲ್ಲಿ ಬೇಸರ ಉಂಟುಮಾಡಿತ್ತು. ಇವೆಲ್ಲವುಗಳ ನಡುವೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಏಕಾಂಗಿಯಾದ ಶ್ವಾನಕ್ಕೆ ಆಸರೆ ಒದಗಿಸಿದ್ದಾರೆ. ಜೊತೆಗೆ, ಶ್ವಾನಕ್ಕೆ ಲಕ್ಷ್ಮಣ ನಾಯ್ಕ ಅವರ ಮಗ ರೋಷನ್ ಅವರ ಹೆಸರನ್ನೇ ಇಟ್ಟಿದ್ದಾರೆ.