ಧಾರವಾಡ: ತಂದೆ-ತಾಯಿ ಪ್ರತಿಯೊಬ್ಬರ ಬಾಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತಂದೆ ಮಮತೆಯ ಆಗಸ, ಪ್ರೀತಿಯ ಪರ್ವತ. ಮಕ್ಕಳಿಗೆ ಅಪ್ಪನೇ ಮೊದಲ ಹೀರೋ. ಅಪ್ಪ-ಅಮ್ಮ ನಮ್ಮೆರಡು ಕಣ್ಣುಗಳು, ಪ್ರತ್ಯಕ್ಷ ದೇವರು ಎಂದರೂ ತಪ್ಪಾಗಲಾರದು. ಆದರೆ ಆಧುನಿಕ ಯುಗದಲ್ಲಿ ತಂದೆ-ತಾಯಿ ಮತ್ತು ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಅಷ್ಟೇ ಅಲ್ಲದೇ, ಸಂಬಂಧಗಳ ಬೆಲೆ ಅರಿಯದೇ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ.
ಆದರೆ, ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ಈ ಮಾತುಗಳಿಗೆ ತದ್ವಿರುದ್ಧವಾದ ಬೆಳವಣಿಗೆ ಕಂಡುಬಂದಿದೆ. ಇಬ್ಬರು ಪುತ್ರರು ತಮ್ಮ ತಂದೆ ಸಾವಿಗೀಡಾದ ಮೇಲೆ ಅವರ ನೆನಪಿಗಾಗಿ ಸ್ಮಾರಕ ನಿರ್ಮಿಸಿದ್ದಾರೆ.
30 ಲಕ್ಷ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ: ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿ, ತಂದೆಯ ಪುತ್ಥಳಿ ಪ್ರತಿಷ್ಠಾಪಿಸಿರುವ ಮಕ್ಕಳು, ನಿತ್ಯ ಪೂಜೆ ಮಾಡುತ್ತಿದ್ದಾರೆ. ದಿ.ಶಿವಪ್ಪ ಮಲಕಾರಿ ತಮ್ಮ 95ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಕಳೆದ ವರ್ಷ ಆಗಸ್ಟ್ 5ರಂದು ನಿಧನರಾಗಿದ್ದರು. ನಿನ್ನೆಗೆ ಒಂದು ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸ್ಮಾರಕ ನಿರ್ಮಿಸಿ ತಂದೆಯ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.
ಪುತ್ರ ಹೊನ್ನಪ್ಪ ಮಲಕಾರಿ ಮಾತನಾಡಿ, "ತಂದೆಯ ಸ್ಮಾರಕ ನಿರ್ಮಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಮಗೆ ಜನ್ಮ ನೀಡಿದ ಅವರ ನೆನಪು ಶಾಶ್ವತವಾಗಿ ಉಳಿಯಲಿ ಎಂದು ಸ್ಮಾರಕ ರೂಪದ ಮಂದಿರ ನಿರ್ಮಿಸಿದ್ದೇವೆ" ಎಂದರು.
ಮತ್ತೋರ್ವ ಪುತ್ರ ಬಸವರಾಜ ಮಲಕಾರಿ ಪ್ರತಿಕ್ರಿಯಿಸಿ, "ನಮ್ಮ ತಂದೆಯವರು ಇಹಲೋಕ ತ್ಯಜಿಸಿ ನಿನ್ನೆಗೆ ಒಂದು ವರ್ಷ. ಸಾವಿನ ನಂತರ ಜಮೀನಿನಲ್ಲೇ ಅಂತ್ಯಕ್ರಿಯೆ ಮಾಡಬೇಕೆಂದು ಅವರಿಗೆ ಆಸೆ ಇತ್ತು. ಅವರ ಆಸೆಯಂತೆ ನಾವು ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದೆವು. ಅಣ್ಣ ಹೊನ್ನಪ್ಪ ಸಿವಿಲ್ ಇಂಜಿನಿಯರ್ ಆಗಿದ್ದಾರೆ, ಅವರೊಂದಿಗೆ ಚರ್ಚಿಸಿ ಶಾಶ್ವತವಾಗಿ ತಂದೆಯ ನೆನಪು ಉಳಿಯುವ ಸಲುವಾಗಿ ಮತ್ತು ಮುಂದೆ ನಮ್ಮ ಮಕ್ಕಳಿಗೂ ಅವರ ಬಗ್ಗೆ ತಿಳಿಯಲೆಂದು ಸ್ಮಾರಕ ನಿರ್ಮಿಸಿದ್ದೇವೆ. ಮಹಾರಾಷ್ಟ್ರದಿಂದ ನಮ್ಮ ತಂದೆಯ ಕಂಚಿನ ಪುತ್ಥಳಿ ಮಾಡಿಸಿಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದೇವೆ" ಎಂದು ಸ್ಮರಿಸಿದರು.
ಇದನ್ನೂ ಓದಿ: ಆಗಸ್ಟ್ ರಜಾ ದಿನಗಳಲ್ಲಿ ನೈರುತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ: ವೇಳಾಪಟ್ಟಿ ಇಂತಿದೆ - Special Train Services