ಮೈಸೂರು : ಮುಖ್ಯಮಂತ್ರಿ ವಿರುದ್ದ ಪ್ರಕರಣ ದಾಖಲಿಸಲು ಯಾವುದೇ ಕಾನೂನು ತೊಡಕಿಲ್ಲ. ಆದರೂ ಅಧಿಕಾರಿಗಳು ತಡ ಮಾಡುತ್ತಿದ್ದಾರೆ. ಈ ಹಿನ್ನೆಲೆ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸುತ್ತೇವೆ ಎಂದು ಲೋಕಾಯುಕ್ತ ಕಚೇರಿ ಬಳಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಲೋಕಾಯುಕ್ತ ಎಸ್ಪಿ ಅವರನ್ನ ಭೇಟಿ ಮಾಡಲು ಆಗಮಿಸಿದ ವೇಳೆ ಕಚೇರಿಯ ಸಿಬ್ಬಂದಿ ಮೊಬೈಲ್ ಹೊರಗೆ ಇಟ್ಟು ಬನ್ನಿ ಎಂದು ಹೇಳಿದರು.
’ಹೆದರಿಕೊಳ್ಳುವ ಅಧಿಕಾರಿ ಭೇಟಿ ಮಾಡುವ ಅವಶ್ಯಕತೆ ಇಲ್ಲ’: ನಾನು ಮೊಬೈಲ್ ಏಕೆ ಈಚೆ ಕಡೆ ಈಡಬೇಕು ಎಂದಿದ್ದಕ್ಕೆ ಸ್ಪಷ್ಟೀಕರಣ ನೀಡಲಿಲ್ಲ. ಮೊಬೈಲ್ಗೆ ಹೆದರಿಕೊಳ್ಳುವ ಅಧಿಕಾರಿಯನ್ನ ಭೇಟಿ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಆಪ್ತ ಸಹಾಯಕರಿಗೆ ಹೇಳಿ ಬಂದಿದ್ದೇನೆ. ಒಂದು ಸಣ್ಣ ಮೊಬೈಲ್ಗೆ ಹೆದರಿಕೊಳ್ಳುವ ಅಧಿಕಾರಿ ರಾಜ್ಯದ ಸಿಎಂ ವಿರುದ್ಧ ಮೊಕದ್ದಮೆ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬುದರ ಮೇಲೆ ನನಗೆ ನಂಬಿಕೆ ಬರಲಿಲ್ಲ ಎಂದರು.
ನೀವು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತೀರಿ ಎಂದು ಅವರು ಹಾಗೆ ಹೇಳಿರಬಹುದು ಎಂಬ ಪ್ರಶ್ನೆಗೆ, ರೆಕಾರ್ಡ್ ಮಾಡಿಕೊಂಡರೆ ಏನು ತೊಂದರೆ. ನಾನು ರೆಕಾರ್ಡಿಂಗ್ ಮಾಡಿಕೊಳ್ಳುತ್ತೇನೆ ಎಂದು ಭಯಪಡುವುದಾದರೆ, ಅವರು ಕರ್ತವ್ಯಕ್ಕೆ ವಿರುದ್ದವಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತೆ. ಕಾನೂನು ಪ್ರಕಾರ ನಡೆದುಕೊಂಡರೆ ಏಕೆ ಹೆದರುತ್ತಾರೆ. ಲೋಕಾಯುಕ್ತ ಕಚೇರಿಯೊಳಗೆ ಸಿಸಿಟಿವಿ ಇಲ್ಲ, ಯಾವುದೇ ಕ್ಯಾಮರವೂ ಇಲ್ಲ. ಇಲ್ಲಿ ಅಕ್ರಮ ನಡೆಯುವುದು ಖಚಿತ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ ಎಂದರು.
ನ್ಯಾಯಾಲಯದ ಆದೇಶದಂತೆ ಎಫ್ಐಆರ್ ದಾಖಲಿಸಲು ಯಾವುದೇ ತೊಡಕಿಲ್ಲ. ಬೇಕಂತಲೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಳ್ಳಲು ತಡ ಮಾಡುತ್ತಿದ್ದಾರೆ. ಇವರು ಸಿಎಂ ಕುಟುಂಬದ ವಿರುದ್ದ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಇನ್ನು ತನಿಖೆ ಹೇಗೆ ನಡೆಸಲು ಸಾಧ್ಯ . ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಹೇಳಲು ಕರ್ನಾಟಕ ಹೈಕೋರ್ಟ್ನಲ್ಲಿ ಇಂದು ನಮ್ಮ ವಕೀಲರು ಅರ್ಜಿ ಸಲ್ಲಿಸುತ್ತಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದ್ದಾರೆ.