ಶಿವಮೊಗ್ಗ: ಮಧ್ಯರಾತ್ರಿ ರಸ್ತೆ ದಾಟುತ್ತಿದ್ದ ಮಣ್ಣುಮುಕ್ಕ ಹಾವಿನ (Sand boa snake) ಮೇಲೆ ವಾಹನ ಹರಿದು ಗಾಯಗೊಂಡಿತ್ತು. ಶರಾವತಿ ನಗರದ 60 ಅಡಿ ರಸ್ತೆಯಲ್ಲಿ ಮಣ್ಣುಮುಕ್ಕ ಹಾವು ಗಾಯಗೊಂಡು ಒದ್ದಾಡುತ್ತಿದ್ದುದನ್ನು ಕಂಡು ಸ್ಥಳೀಯರು ಸ್ನೇಕ್ ಕಿರಣ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದರು. ಸ್ನೇಕ್ ಕಿರಣ್ ರಾತ್ರಿಯೇ ಬಂದು ಹಾವನ್ನು ನೋಡಿ, ಅದಕ್ಕೆ ಉಪಚರಿಸಿದರು. ಸ್ಥಳೀಯರಿಗೆ ಮಣ್ಣುಮುಕ್ಕ ಹಾವಿನ ಬಗ್ಗೆ ಮಾಹಿತಿ ನೀಡಿ, ಇದನ್ನು ಕಂಡು ಭಯ ಪಡುವುದು ಬೇಡ. ಇದು ಯಾರಿಗೂ ಸಹ ತೊಂದರೆ ನೀಡದೆ ಇರುವ ಸರಿಸೃಪ ಎಂದು ಮಾಹಿತಿ ನೀಡಿದರು.
ಅಲ್ಲಿಂದ ರಾತ್ರಿಯೇ ಆಲ್ಕೋಳದಲ್ಲಿನ ಶಂಕರ ವಲಯದ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಅಧಿಕಾರಿಗಳಿಗೆ ವಿಚಾರ ತಿಳಿಸಿದರು. ಮೇಲಾಧಿಕಾರಿಗಳು ಬೆಳಗ್ಗೆ ಬರುವುದಾಗಿ ಹೇಳಿದಾಗ ಸ್ನೇಕ್ ಕಿರಣ್ ಪುನಃ ಬೆಳಗ್ಗೆ ಹೋಗಿ ಅಧಿಕಾರಿಗಳನ್ನು ಕಂಡು ಅವರ ಅನುಮತಿ ಪಡೆದು, ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿಯೇ ಹಾವನ್ನು ಅರಣ್ಯದೊಳಗೆ ಬಿಟ್ಟು ಬಂದರು.
ಹಾವಿನ ಬಗ್ಗೆ ಮಾಹಿತಿ: "ಮಣ್ಣುಮುಕ್ಕ ಹಾವನ್ನು ಎರಡು ತಲೆ ಹಾವು ಅಂತಲೂ ಕರೆಯುತ್ತಾರೆ. ಆದರೆ ಇದಕ್ಕೆ ಒಂದೇ ತಲೆ ಇರುತ್ತದೆ. ಇದು ಮಣ್ಣಿನಲ್ಲಿಯೇ ವಾಸ ಮಾಡುತ್ತದೆ. ಅಂದಹಾಗೆ ಇದನ್ನು ಭಾರಿ ಬೆಲೆಗೆ ಕೊಂಡು ಮಾರಾಟ ಮಾಡುವ ಜಾಲವೇ ಇದೆ. ಇದು ವಿಷ ರಹಿತ ಹಾವಾಗಿದೆ. ಇದು ಯಾರಿಗೂ ಏನೂ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಇದು ಯಾರಿಗೂ ಕಚ್ಚುವುದಿಲ್ಲ. ಇದನ್ನು ಕಂಡು ಭಯಪಡುವ ಅವಶ್ಯಕತೆ ಇಲ್ಲ" ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು: ಕನ್ನಡಿ ಹಾವು ಕಚ್ಚಿದರೂ ವಿಷರಹಿತ ಹಾವೆಂದು ಭಾವಿಸಿದ್ದ ವ್ಯಕ್ತಿ ಸಾವು - Snake Bite