ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತರಿಂದ ಆರು ಜೀವಂತ ಗುಂಡುಗಳ ಸಹಿತ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಜಿಲ್ಲೆಯ ರೋಷನ್ ಜಮೀರ್ ಹಾಗೂ ಹಜರತ್ ಅಲಿ ಬಂಧಿತ ಆರೋಪಿಗಳು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಅಕ್ರಮವಾಗಿ ಆರೋಪಿಗಳು ಗಾಂಜಾ ಮಾರಾಟಕ್ಕೆ ಮುಂದಾಗಿದ್ದರು. ಈ ವೇಳೆ, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಸಿಪಿ ಎಸ್.ಪಿ ಒಡೆಯರ್, ಪಿಎಸ್ಐ ದೇವೆಂದ್ರಪ್ಪ, ಸಿಸಿಬಿ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ, ರಾಜೇಸಾಬ್ ಗುಂಜಾಳ, ಎಸ್ಐ ಕಡೇಮನಿ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಮೂವರು ಅಂತಾರಾಜ್ಯ ಮನೆಗಳ್ಳರ ಬಂಧನ: ಮೂವರು ಅಂತಾರಾಜ್ಯ ಮನೆ ಕಳ್ಳರ ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 8,68,000 ರೂ. ಮೌಲ್ಯದ 10.4 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಶಾಂತನಗರ, ಸಿದ್ದಲಿಂಗೇಶ್ವರ ಕಾಲನಿ, ಆನಂದನಗರ, ಬೈಲ್‌ಹೊಂಗಲ್ ಹಾಗೂ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಆಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ಆಯುಕ್ತರು ಮಾರ್ಗದರ್ಶನದಲ್ಲಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಸ್.ಹೆಚ್. ಯಳ್ಳೂರ, ಪಿಎಸ್ಐ ರೂಪಕ ಡಿ., ವಿ.ಎಸ್.ಚವಡಿ ನೇತೃತ್ವದ ತಂಡ ಆರೋಪಿತರನ್ನು ಪತ್ತೆ ಹಚ್ಚಿ ಕಳ್ಳತನವಾದ ಒಟ್ಟು 10.4 ಗ್ರಾಂ ಚಿನ್ನಾಭರಣ, 160 ಗ್ರಾಂ ಬೆಳ್ಳಿಯ ಒಡವೆ, ಕಳ್ಳತನ ಮಾಡಲು ಬಳಸಿದ ಕಾರನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ, ಪೊಲೀಸ್ ಸಬ್ ಇನ್ಸಪೆಕ್ಟರ, ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ ಹಾಗೂ ಸಿಬ್ಬಂದಿಯವರ ಕಾರ್ಯವೈಖರಿ ಶ್ಲಾಘಿಸಿ, ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಮಾರಾಟ ದಂಧೆ: ಮಹಿಳೆ ಬಳಿ 4 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ!
ಇದನ್ನೂ ಓದಿ: ವಾಣಿಜ್ಯ ನಗರಿಯಲ್ಲಿ ಪುಡಿರೌಡಿಗಳ ಅಟ್ಟಹಾಸ: ಕಲ್ಲಿನಿಂದ ಹೊಡೆದು ಯುವಕನ ಮೇಲೆ ಹಲ್ಲೆ