ಬೆಳಗಾವಿ : "ಹಸಿರು ಬೆಳಗಾವಿ" ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ, 33 ಕೋಟಿ ರೂ. ಖರ್ಚು ಮಾಡಿ ಆರಂಭಿಸಿದ್ದ ವಿದ್ಯುತ್ ಚಾಲಿತ ಸೈಕಲ್ ಸೇವೆ, ನಿರ್ವಹಣೆ ಕೊರತೆಯಿಂದ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಒಂದೆಡೆ ಪ್ರತ್ಯೇಕ ಸೈಕಲ್ ಟ್ರ್ಯಾಕ್‌ಗಳು ಬೀದಿ ಬದಿ ವ್ಯಾಪಾರಿಗಳು, ವಾಹನಗಳ ಪಾರ್ಕಿಂಗ್ ಜಾಗವಾಗಿ ಮಾರ್ಪಟ್ಟಿವೆ.
ಸಂಚಾರ ದಟ್ಟಣೆ ನಿಯಂತ್ರಣ, ಪರಿಸರ ಸ್ನೇಹಿ ಸೈಕಲ್ ಬಳಕೆ ಉತ್ತೇಜಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ 'ಬೈಸಿಕಲ್ ಸರ್ವಿಸ್ ನೆಟ್ ವರ್ಕ್' ಮೂಲಕ 33 ಕೋಟಿ ರೂ. ಅನುದಾನದಲ್ಲಿ 1.5 ಮೀಟರ್ ಅಗಲದ 31 ಕಿ ಮೀ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಿ 2022ರಲ್ಲಿ 300 ವಿದ್ಯುತ್ ಚಾಲಿತ ಬೈಸಿಕಲ್, ಪೆಡಲ್, ಪೆಡಲ್ ಸೈಕಲ್‌ಗಳನ್ನು ಜನರ ಸೇವೆಗೆ ಮುಕ್ತಗೊಳಿಸಲಾಗಿತ್ತು. ಆದರೆ, ಸೈಕಲ್ಗಳಿಗೆ ಬ್ಯಾಟರಿ ಚಾರ್ಜ್ ಇಲ್ಲದಿರುವುದು, ಅಲ್ಲಲ್ಲಿ ಕೆಟ್ಟು ನಿಲ್ಲುವುದು ಮತ್ತು ಜಾಗೃತಿ ಕೊರತೆ ಸೇರಿ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಯೋಜನೆ ಜನರಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನಗರದ ರಾಣಿ ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ಮಹಾರಾಜ ವೃತ್ತ, ಆರ್ಪಿಡಿ ಕಾಲೇಜು ರಸ್ತೆ, ಕಾಲೇಜು ರಸ್ತೆ, ತಿಳಕವಾಡಿ ರೈಲ್ವೆ ಮೊದಲ ಗೇಟ್, ವ್ಯಾಕ್ಸಿನ್ ಡಿಪೋ ಮೈದಾನ, ಉದ್ಯಮಬಾಗ, ಕೇಂದ್ರ ಬಸ್ ನಿಲ್ದಾಣ, ಕಣಬರ್ಗಿ ರಸ್ತೆ, ಶ್ರೀನಗರ ಉದ್ಯಾನವನ, ಕೃಷ್ಣದೇವರಾಯ ವೃತ್ತ, ಎಪಿಎಂಸಿ ರಸ್ತೆ, ಜಾಧವ ರಸ್ತೆ, ಹನುಮಾನ ನಗರ, ಹಿಂಡಲಗಾ ಗಣಪತಿ ಮಂದಿರ ಸೇರಿ 20 ಕಡೆ ಬೈಸಿಕಲ್ ನಿಲುಗಡೆ ತಾಣ ನಿರ್ಮಿಸಲಾಗಿದೆ.
300 ವಿದ್ಯುತ್ ಚಾಲಿತ ಸೈಕಲ್ಗಳ ಖರೀದಿಗೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದ್ದು, ನಗರದ 20 ಕಡೆಗಳಲ್ಲಿರುವ ಬಹುತೇಕ ಸೈಕಲ್‌ಗಳು 'ಲೋ ಬ್ಯಾಟರಿ' ಸಿಗ್ನಲ್ ತೋರಿಸುತ್ತಿವೆ. ಈ ಸೈಕಲ್ ಬಳಕೆಗೆ ಮೊಬೈಲ್ ಆ್ಯಪ್ ಬಳಸಿ 500 ರೂ. ಠೇವಣಿ ಇಡುವುದು ಕಡ್ಡಾಯ. ಆದರೆ, ಠೇವಣಿ ಇಟ್ಟವರಿಗೂ ಬ್ಯಾಟರಿ ಚಾರ್ಜ್ ಇರುವ ಸೈಕಲ್‌ಗಳು ಸಿಗುತ್ತಿಲ್ಲ. ಹಾಗಾಗಿ ಇ - ಸೈಕಲ್‌ಗಳನ್ನು ಬಳಸುವುದನ್ನೆ ಜನ ಮರೆತಿದ್ದಾರೆ. ಇನ್ನು 2023ರ ಜುಲೈ 16ರಿಂದ 2024 ಮೇ 23ರವರೆಗೆ ಒಟ್ಟು 15,836 ಜನರು, 52,423 ಬಾರಿ ಸೈಕಲ್ ಸವಾರಿ ಮಾಡಿರುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಈವರೆಗೆ ಅತೀ ಹೆಚ್ಚು 182 ಬಾರಿ ಸೈಕಲ್ ಬಳಸಿರುವ ಸುಕನ್ಯಾ ಹಿರೇಮಠ ಈಟಿವಿ ಭಾರತ ಜೊತೆಗೆ ಮಾತನಾಡಿ, ನನಗೆ ಸೈಕಲ್ ಕ್ರೇಜ್ ತುಂಬಾ ಇದೆ. ಅಲ್ಲದೇ ಇದು ಪರಿಸರ ಸ್ನೇಹಿ ಮತ್ತು ಆರೋಗ್ಯಕ್ಕೆ ಅನುಕೂಲಕರ. ಹಾಗಾಗಿ, ಆರಂಭದಲ್ಲಿ 3-4 ತಿಂಗಳು ಪ್ರತಿದಿನ ಎರಡು ಬಾರಿ ಸೈಕಲ್ ಉಪಯೋಗಿಸಿದ್ದೇನೆ. ಮಳೆಗಾಲ ನಂತರ ಸೈಕಲ್ ಸರಿಯಾಗಿ ವರ್ಕ್ ಆಗಲಿಲ್ಲ. ಹಾಗಾಗಿ, ಈಗ ಸೈಕಲ್ ಬಳಸುವುದು ಬಿಟ್ಟಿದ್ದೇನೆ ಎಂದು ಬೇಸರ ಹೊರ ಹಾಕಿದರು.
ವಿದ್ಯಾರ್ಥಿ ಬಾಳೇಶ ಕೋಟಬಾಗಿ ಮಾತನಾಡಿ, ಜಾಸ್ತಿ ಜನ ಇ - ಸೈಕಲ್ ಬಳಕೆ ಮಾಡುತ್ತಿಲ್ಲ. ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಪರಿಸರ ಮಾಲಿನ್ಯ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಸೈಕಲ್‌ಗಳನ್ನು ಉಪಯೋಗಿಸಿದರೆ ಪರಿಸರ ರಕ್ಷಣೆ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಕೋಟಿ ಸುರಿದು ಸೈಕಲ್ ಖರೀದಿಸಿ, ಸರಿಯಾಗಿ ನಿರ್ವಹಣೆ ಮಾಡದಿರುವುದು ವಿಪರ್ಯಾಸವೇ ಸರಿ. ಇನ್ಮುಂದೆಯಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ಸ್ಮಾರ್ಟ್ ಸಿಟಿ: ಶಿವಮೊಗ್ಗದಲ್ಲಿ ತಂತ್ರಜ್ಞಾನ ಆಧಾರಿತ ಸೈಕಲ್ ಸೇವೆ ಪ್ರಾರಂಭ