ಬೆಂಗಳೂರು: ಶಿಲ್ಪಾ ಫೌಂಡೇಶನ್ ಸೇಪಿಯನ್ಸ್ ಸಂಸ್ಥೆಯ ಸಿಎಸ್ಆರ್ ನಿಧಿ ಅಡಿಯಲ್ಲಿ ಕೋರಮಂಗಲದ ಆಡುಗೋಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಹಾಗೂ ಅತ್ಯಾಧುನಿಕ ಸ್ಮಾರ್ಟ್ ಬಸ್ ನಿಲ್ದಾಣವನ್ನು ಗುರುವಾರ ಸಾರ್ವಜನಿಕರಿಗೆ ಸಮರ್ಪಿಸಿ ಮಾಜಿ ಮಹಾಪೌರರಾದ ಮಂಜುನಾಥ ರೆಡ್ಡಿ ಬಿಬಿಎಂಪಿಗೆ ಹಸ್ತಾಂತರ ಮಾಡಿದರು.
ಸೇಪಿಯನ್ಸ್ ಸಂಸ್ಥೆಯ ಮುಖ್ಯಸ್ಥ ಸುಶೀಲ್ ಮಹ್ಲಾ ಈ ಸಂದರ್ಭದಲ್ಲಿ ಮಾತನಾಡಿ, ಶಿಲ್ಪಾ ಫೌಂಡೇಶನ್, ಬಹುರಾಷ್ಟ್ರೀಯ ಕಂಪನಿಯಾದ ಸೇಪಿಯನ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆಯನ್ನು ತರಲು ಹಾಗೂ ಸಾರ್ವಜನಿಕರಿಗೆ ಅನುಕೂಲಕರ ಮತ್ತು ಹೊಸ ಅನುಭವವನ್ನು ನೀಡುವ ನಗರದ ಪ್ರಮುಖ 3 ಪ್ರದೇಶಗಳಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕವಾದ ಸ್ಮಾರ್ಟ್ ಬಸ್ ನಿಲ್ದಾಣಗಳನ್ನು ನಿರ್ಮಿಸಿದೆ. ಈ ಯೋಜನೆ ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಹಾಗೂ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವನ್ನು ಬಳಕೆಗೆ ತಂದಿದೆ. ಈ ಯೋಜನೆಯನ್ನು ಬ್ರಾಂಡ್ ಬೆಂಗಳೂರು ಅಡಿಯಲ್ಲಿ ಜರಿ ತರಲಾಗಿದೆ. ಇದಕ್ಕೂ ಮುನ್ನ ನೃಪತುಂಗ ರಸ್ತೆಯ ಹಾಗೂ ಕಾಡುಬೀಸನಹಳ್ಳಿಯಲ್ಲಿ ಸ್ಮಾರ್ಟ್ ನಿಲ್ದಾಣವನ್ನು ನಿರ್ಮಿಸಿ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು ಎಂದು ಹೇಳಿದರು.
ನಗರದಲ್ಲಿ ಅನಿಯಮಿತ ಬಸ್ ನಿಲ್ದಾಣಗಳಿದ್ದರೂ ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಶೈಲಿಯ ಗುಣಮಟ್ಟದ ನಿಲ್ದಾಣವನ್ನು ಕಲ್ಪಿಸುವುದು ಸ್ಮಾರ್ಟ್ ನಿಲ್ದಾಣದ ಉದ್ದೇಶವಾಗಿದೆ. ಅದಕ್ಕಾಗಿಯೇ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅತಿ ಉಪಯುಕ್ತವಾಗುವ ರೀತಿಯಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದರು.
ಸಕಲ ಸೌಲಭ್ಯ: ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ 24/7 ಸಿಸಿ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಹಾಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಸಿಸಿ ಕ್ಯಾಮರಾಗಳು ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಹೊಂದಿರಲಿದ್ದು, ಸ್ಥಳೀಯ ಠಾಣಾ ಪೊಲೀಸರ ನಿರೀಕ್ಷಣೆಯಲ್ಲಿರಲಿದೆ ಎಂದು ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಪ್ರಮುಖವಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮುಖ್ಯವಾಗಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್ ಬಟನ್ ಒತ್ತಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಪಾಯಕ್ಕೊಳಗಾದವರನ್ನು ರಕ್ಷಣೆ ಮಾಡಲಿದ್ದಾರೆ ಎಂದು ಸೇಪಿಯನ್ಸ್ ಸಂಸ್ಥೆಯ ನಿಶಾ ಹೆಗ್ಡೆ ತಿಳಿಸಿದರು.
ಸ್ಮಾರ್ಟ್ ಬಸ್ ನಿಲ್ದಾಣದಲ್ಲಿ ಯಾವುದೇ ಸಂದರ್ಭದಲ್ಲಿ ಮಹಿಳೆಯರಿಗೆ 24/7 ಸ್ಯಾನಿಟರಿ ಪ್ಯಾಡ್ಗಳು ದೊರೆಯಲಿವೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ಯಾಡ್ ಗಳನ್ನು ಸ್ವೀಕರಿಸಬಹುದು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಥವಾ ಸಾರ್ವಜನಿಕರಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಮಾಡಲು ಚಾರ್ಜಿಂಗ್ ಪಾಯಿಂಟ್ಗಳು ಇರಲಿವೆ. ದಿನದ 24 ಗಂಟೆಗಳೂ ಇವೆ ಕಾರ್ಯರೂಪದಲ್ಲಿರುತ್ತವೆ ಎಂದರು.
ಶಿಲ್ಪಾ ಫೌಂಡೇಶನ್ನ ಅಚ್ಯುತ್ ಗೌಡ ಮಾತನಾಡಿ, ಬಸ್ ನಿಲ್ದಾಣದಲ್ಲಿ ಸೆನ್ಸಾರ್ ಬೇಸ್ಡ್ ಡಸ್ಟ್ ಬಿನ್ ಅಳವಡಿಸಲಾಗಿದ್ದು, ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ತ್ಯಾಜ್ಯ ಶೇಖರಿಸಲಿದ್ದೇವೆ. ಈ ತ್ಯಾಜ್ಯ ತುಂಬಿದ ಕೂಡಲೇ ಆನ್ಲೈನ್ ಮೂಲಕ ಸೈರನ್ ನಿರ್ವಾಹಕರಿಗೆ ಮಾಹಿತಿ ತಲುಪಲಿದ್ದು, ಅವರು ತಕ್ಷಣ ತ್ಯಾಜ್ಯ ವಿಲೇವಾರಿ ಮಾಡಬಹುದಾಗಿದೆ. ನಾಲ್ಕು ಡಿಸ್ಪ್ಲೇಗಳನ್ನು ಅಳವಡಿಸಿದ್ದು ಒಂದರಲ್ಲಿ ಬಿಎಂಟಿಸಿ ಬಸ್ಗಳ ವಿವರ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಮಳೆ ನೀರನ್ನು ಸಂಗ್ರಹಿಸಿ ನೀರು ಪೋಲಾಗದಂತೆ ಗಿಡಗಳಿಗೆ ಹಾಗೂ ಇಂಗು ಗುಂಡಿಗಳಿಗೆ ಬಿಡಲಾಗುತ್ತದೆ. ನಿಲ್ದಾಣದಲ್ಲಿ ಸ್ನ್ಯಾಕ್ ವೆಂಡಿಂಗ್ ಮಷಿನ್ ಕೂಡಾ ಅಳವಡಿಸಬಹುದಾಗಿದೆ. ಇಂದು ಕೋರಮಂಗಲದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಬಸ್ ನಿಲ್ದಾಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದು, ಇಲ್ಲಿ ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಡಿಸ್ಪ್ಲೇಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಬಿಬಿಎಂಪಿ ಅಥವಾ ಸರ್ಕಾರದ ಮಾಹಿತಿಗಳನ್ನು ಬಿಬಿಎಂಪಿ ಬಿತ್ತರಿಸಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಯಾವೆಲ್ಲ ಬಸ್ಗಳು ಓಡಲಿವೆ: ಡಿಸೆಂಬರ್ ಅಂತ್ಯದ ವೇಳೆಗೆ ಕಾರ್ಯಾಚರಣೆ