ಬೆಂಗಳೂರು: ವಿಧಾನಸೌಧದ ಗುಮ್ಮಟದ ಒಳಭಾಗದಲ್ಲಿ ಸಣ್ಣದಾಗಿನ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು ಗುಮ್ಮಟದ ಒಳಭಾಗದ ಸೀಲಿಂಗ್ಗೆ ಸೀಮಿತವಾಗಿದೆಯೋ? ಅಥವಾ ಆಳವಾದ ಬಿರುಕೋ ಎಂಬುದು ಸ್ಪಷ್ಟವಾಗಿಲ್ಲ.
ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಈ ತೆಳ್ಳಗಿನ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕಿನಿಂದ ನೀರು ಸೋರಿಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಈ ಮುಂಚೆಯೇ ಉಂಟಾಗಿದ್ದ ಬಿರುಕೋ ಅಥವಾ ಈಗಷ್ಟೇ ಉಂಟಾಗಿದೆಯೋ ಎಂಬುದೂ ಕೂಡ ತಿಳಿದಿಲ್ಲ.
ಈ ಸಂಬಂಧ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್, ''ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಿಎಂ ಗಮನಕ್ಕೆ ನಾನು ತರುತ್ತೇನೆ. ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರಿಗೆ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ'' ಎಂದರು.
''ಇದು ಬಹಳ ವರ್ಷದ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು. ನಾನು ಆದಷ್ಟು ಬೇಗ ಸಿಎಂಗೆ ಈ ವಿಚಾರ ತಿಳಿಸುತ್ತೇನೆ'' ಎಂದು ಸ್ಪೀಕರ್ ಖಾದರ್ ತಿಳಿಸಿದರು.