ಹುಬ್ಬಳ್ಳಿ: ವ್ಯಕ್ತಿಯೋರ್ವನ ಕೊಲೆಗೆ ಸಂಚು ರೂಪಿಸಿದ ಆರು ಮಂದಿ ಆರೋಪಿಗಳನ್ನು ಸೆರೆ ಹಿಡಿದಿರುವ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು, ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೇ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠದ ಬಳಿ ಗಣೇಶ್ ಎಂಬ ವ್ಯಕ್ತಿ ಬೇರೊಬ್ಬರೊಂದಿಗೆ ಜಗಳವಾಡುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ದೀಪಕ್ ಎಂಬಾತ ಜಗಳ ಬಿಡಿಸಲು ಮುಂದಾಗಿದ್ದಾನೆ. ಆಗ ಗಣೇಶ್, ದೀಪಕ್ ಮೇಲೆ ಬೆದರಿಕೆ ಹಾಕಿ, ನಿಂದ್ ಬಾಳ್ ಆಗೇತಿ ನೋಡ್ಕೋತೀನಿ ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೆ ದೀಪಕ್, ಗಣೇಶ್ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೇ ನೆಪವಾಗಿಟ್ಟುಕೊಂಡು ಗಣೇಶ್, ದೀಪಕ್ನ ಕೊಲೆಗೆ ಸಂಚು ರೂಪಿಸಿ ಮಂಜುನಾಥ ಪಂಚ್ಯಾಣ, ಪವನ್ ಗಬ್ಬೂರ, ವಿನಾಯಕ ದುಂಡಿ, ನಾಗರಾಜ್ ಮಿರಜಕರ್, ರಾಜಪ್ಪ ಹನುಮನಹಳ್ಳಿ, ಸೂಹಾನ್ ವಜ್ಜಣ್ಣವರ ಎಂಬಾತರನ್ನು ಸೇರಿಸಿಕೊಂಡು ಸಿದ್ದಾರೂಢ ಮಠದ ದ್ವಾರ ಬಾಗಿಲು ಕಡೆ ಇರುವ ಕಚೇರಿ ಹತ್ತಿರ ಹಲ್ಲೆಗೆ ಯತ್ನಿಸಿದ್ದಾರೆ. ದೀಪಕ್ ಪ್ರಾಣಾಪಾಯದಿಂದ ಪಾರಾಗಿ, ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಗಣೇಶ್ ಬಿಲಾನ್ ತಲೆಮರೆಸಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ 1 ಆಟೋ ರಿಕ್ಷಾ, 2 ಮೋಟಾರ್ ಬೈಕ್, 2 ತಲವಾರ್ ಹಾಗೂ 2 ಚಾಕುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಮೀಷನರ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಪತ್ತೆ ಮಾಡಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಸಹೋದರಿಯನ್ನು ಹತ್ಯೆ ಮಾಡಿದ ಆರೋಪಿ ಸೇರಿ ಆರು ಜನರ ಬಂಧನ - Sister Murder for property issue