ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಹಾಸನದಲ್ಲಿ ಸುಮಾರು 18 ಕಡೆ ಶೋಧ ನಡೆಸಿದ್ದಾರೆ.
ಏಲ್ಲೆಲ್ಲಿ ದಾಳಿ?: ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾದ ಕ್ವಾಲಿಟಿ ಬಾರ್ ಶರತ್, ವಲ್ಲಭಾಯಿ ರಸ್ತೆ ಪುನೀತ್, ಕೃಷ್ಣ ಹೋಟೆಲ್ ಮಾಲೀಕ ಹೆಚ್.ಪಿ.ಕಿರಣ್, ಭುವನಹಳ್ಳಿಯ ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಹೊಳೆನರಸೀಪುರದ ಮಾಜಿ ಪುರಸಭಾ ಸದಸ್ಯ ಪುಟ್ಟರಾಜು ಪಾಪಣ್ಣಿ, ಬೇಲೂರು ತಾಲೂಕಿನ ನಲ್ಕೆ ನವೀನ್ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಡುವಿನ ಕೋಟೆ ಕಾರ್ತಿಕ್, ಚನ್ನರಾಯಪಟ್ಟಣದ ಟಿವಿಎಸ್ ಶೋ ರೂಂ ಮಾಲೀಕ ಶಶಿ, ಬೇಲೂರಿನ ಅರೇಹಳ್ಳಿ ಚೇತನ್ ಗೌಡ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ಶೋಧ ನಡೆಸಿದ್ದಾರೆ.
ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್ನಲ್ಲಿ ಶೋಧನೆ ನಡೆಸಿದ್ದ ಎಸ್ಐಟಿ ತಂಡ, ಶರತ್ ಅವರ ಐ-ಫೋನ್ ವಶಕ್ಕೆ ಪಡೆದು ಪರಿಶೀಲಿಸಿದೆ. ಆದರೆ, ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್ಐಟಿ ತಂಡ ಹೇಳಿದೆ. ಇನ್ನು ವಿವಿಧೆಡೆ ಶೋಧ ನಡೆಸಿರುವ ಎಸ್ಐಟಿ, ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದೆ.
ಎಸ್ಐಟಿ ನೋಟಿಸ್: ಪೆನ್ ಡ್ರೈವ್ ಹಂಚಿಕೆ ಸಂಬಂಧ ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನವೀನ್ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ಜೊತೆಗೆ ನಿರೀಕ್ಷಣ ಜಾಮೀನಿನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದರಿಂದ ಎಸ್ಐಟಿ ಶೋಧಕ್ಕೆ ಮುಂದಾಗಿದೆ.