ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಮನೆಗಳ ಮೇಲೆ ದಾಳಿ ಮಾಡಿ, ಮಹತ್ವದ ದಾಖಲಾತಿಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ನಾಳೆ ಬೆಳಗ್ಗೆ ವಿಚಾರಣೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಇ. ಡಿ ದಾಳಿಗೆ ಒಳಗಾಗಿರುವ ಇಬ್ಬರು ಜನಪ್ರತಿನಿಧಿಗಳ ಮೊಬೈಲ್ ಸ್ವಿಚ್ಡ್ ಆಫ್ ಆದ ಹಿನ್ನೆಲೆ ಇಬ್ಬರ ಮನೆಗಳಿಗೆ ಹೋಗಿ ಎಸ್ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 94.73 ಕೋಟಿ ಅವ್ಯವಹಾರ ಆರೋಪ ಕೇಳಿ ಬರುತ್ತಿದ್ದಂತೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮತ್ತೊಂದೆಡೆ ಮಾಜಿ ಸಚಿವರ ಆಪ್ತ ನೆಕ್ಕುಂಟಿ ನಾಗರಾಜ್ ಸೇರಿದಂತೆ ನಿಗಮದ ವ್ಯವಸ್ಥಾಪಕರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾಗ ನಾಗೇಂದ್ರ ಅವರ ಕಡೆ ಬೊಟ್ಟು ಮಾಡಿದ್ದರು ಎನ್ನಲಾಗಿದ್ದು, ಇದನ್ನ ಖಚಿತಪಡಿಸಿಕೊಳ್ಳಲು ನಿನ್ನೆ ನೋಟಿಸ್ ನೀಡಿ ಎಸ್ಐಟಿ ವಿಚಾರಣೆ ಮಾಡಿತ್ತು.
ಇಂದು ಸಹ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಇಂದು ನಡೆದ ದಿಢೀರ್ ಬೆಳವಣಿಗೆಯಿಂದ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ಗೆ ನಾಳೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿರುವುದಾಗಿ ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಗರಣ: ಎಸ್ಐಟಿ ವಿಚಾರಣೆ ಎದುರಿಸಿದ ಮಾಜಿ ಸಚಿವ ನಾಗೇಂದ್ರ, ದದ್ದಲ್ - valmiki corporation scam