ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಎಸ್ಐಟಿ ಅಧಿಕಾರಿಗಳು ಕಳೆದ ರಾತ್ರಿ ಬಂಧಿಸಿದ್ದಾರೆ. ತುಮಕೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಯೋನೊಕಾಯಿನ್ ಕಂಪನಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹ್ಯಾಕ್ ಮಾಡಿರುವ ಆರೋಪದಡಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಶ್ರೀಕಿಗೆ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.
ಪ್ರಕರಣದ ವಿವರ: 2017ರಲ್ಲಿ ತುಮಕೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಯೂನೋಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು ಶ್ರೀಕಿ ವಿರುದ್ಧ ದೂರು ನೀಡಿದ್ದರು. ಕಂಪನಿಯ 60.6 ಬಿಟ್ ಕಾಯಿನ್ಗಳನ್ನು ಕಳವು ಮಾಡಲಾಗಿದೆ, ಪ್ರತಿ ಬಿಟ್ ಕಾಯಿನ್ ಬೆಲೆ 1.67 ಲಕ್ಷದಂತೆ ಸುಮಾರು 1.14 ಕೋಟಿ ರೂ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಅವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಪೊಲೀಸರು ಎಸ್‌ಐಟಿಗೆ ವರ್ಗಾವಣೆ ಮಾಡಿದ್ದರು. ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಕಾಟನ್ ಪೇಟೆ, ಕೆಂಪೇಗೌಡನಗರ, ಅಶೋಕನಗರ, ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎಂಟು ಪ್ರಕರಣಗಳ ಕುರಿತಂತೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಸಾಕ್ಷ್ಯವಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎಸ್ಐಟಿ ಮನವಿ