ಕಾರವಾರ (ಉತ್ತರ ಕನ್ನಡ) : ಸಿದ್ದಿ ಸಮುದಾಯ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗದಲ್ಲಿ ಬರುವ ವಿಶಿಷ್ಟ ಬುಡಕಟ್ಟು ಸಮುದಾಯ. ಆಫ್ರಿಕಾ ದೇಶದವರ ರೀತಿಯಲ್ಲಿ ಕಂಡುಬರುವ ಸಿದ್ದಿ ಸಮುದಾಯದವರ ಆಚರಣೆ, ಸಂಸ್ಕೃತಿ, ಆಹಾರ ಪದ್ಧತಿ, ಜೀವನ ಶೈಲಿ ಸಂಪೂರ್ಣ ವಿಭಿನ್ನ. ಅರಣ್ಯವೇ ತಮ್ಮ ಬದುಕು ಎಂದು ಕಂಡುಕೊಂಡಿರುವ ಸಿದ್ದಿ ಸಮುದಾಯದ ಈ ಎಲ್ಲ ಆಚರಣೆಯನ್ನು ಪ್ರವಾಸಿಗರಿಗೆ ತಿಳಿಸುವ ಹಾಗೂ ಸಿದ್ದಿ ಸಮುದಾಯದ ಮಹಿಳೆಯರ ಜೀವನೋಪಾಯಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವಿಭಿನ್ನ ಪ್ರಯತ್ನಕ್ಕೆ ಇಳಿದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಸಿದ್ದಿ ಸಮುದಾಯ ಎಂದರೆ ನೆನಪಾಗುವುದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ. ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಮುಂಡಗೋಡ, ಅಂಕೋಲಾ, ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಸಿದ್ದಿ ಸಮುದಾಯ ಅರಣ್ಯದೊಂದಿಗೆ ತಮ್ಮ ಜೀವನವನ್ನು ಕಂಡುಕೊಂಡಿದೆ. ನೋಡಲು ಆಫ್ರಿಕಾ ದೇಶದವರ ರೀತಿ ಕಂಡು ಬರುವ ಸಿದ್ದಿ ಸಮುದಾಯ ಬುಡಕಟ್ಟು ಸಮಾಜಕ್ಕೆ ಸೇರಿದೆ. ಈ ಸಮುದಾಯದ ಆಚರಣೆಗಳು, ಆಹಾರ ಪದ್ಧತಿ, ಸಂಸ್ಕೃತಿ, ಜೀವನ ಶೈಲಿ ಸಂಪೂರ್ಣ ವಿಭಿನ್ನ. ಸಿದ್ದಿ ಸಮುದಾಯ ಈ ವಿಭಿನ್ನ ಆಚರಣೆಗಳಿಂದ ಆಕರ್ಷಿತರಾಗಿ ಸಮುದಾಯದ ಹಲವರನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಸಿದ್ದಿ ಹೋಂ ಸ್ಟೇ ಪ್ರಾರಂಭ : ಇಂತಹ ಬುಡಕಟ್ಟು ಸಮುದಾಯದ ಮಹಿಳೆಯರ ಜೀವನೋಪಾಯಕ್ಕಾಗಿ ಹಾಗೂ ಸಿದ್ದಿ ಸಮುದಾಯದ ಸಂಸ್ಕೃತಿ ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವಿಭಿನ್ನ ಪ್ರಯತ್ನಕ್ಕೆ ಇಳಿದಿದೆ. ಜಿಲ್ಲಾ ಪಂಚಾಯತ್ ಅಡಿ ಬರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಹಾಗೂ ಸಂಜೀವಿನಿ ಯೋಜನೆಯಡಿ ಸಿದ್ದಿ ಹೋಂ ಸ್ಟೇ ಪ್ರಾರಂಭಿಸಲಾಗಿದೆ.
ಯಲ್ಲಾಪುರ ತಾಲೂಕಿನ ಲಿಂಗದಬೈಲು ಎನ್ನುವ ಗ್ರಾಮದಲ್ಲಿ ಸಿದ್ದಿ ಸಮುದಾಯದ ಸ್ವಸಹಾಯ ಸಂಘದ ಮಹಿಳೆಯರಿಗಾಗಿಯೇ ಹೋಂ ಸ್ಟೇ ನಿರ್ಮಿಸಲಾಗಿದೆ. ಈ ಹೋಂ ಸ್ಟೇಗೆ ಬರುವ ಪ್ರವಾಸಿಗರಿಗೆ ಸಿದ್ದಿ ಸಮುದಾಯದ ಸಂಸ್ಕೃತಿಯನ್ನು ತಿಳಿಸುವ ಜೊತೆಗೆ ಅವರ ಆಚರಣೆ, ಜೀವನ ಪದ್ಧತಿಯ ಬಗ್ಗೆ ತಿಳಿಸುವ ಜೊತೆಗೆ ಪ್ರವಾಸಿಗರನ್ನು ಸಹ ಆಕರ್ಷಿಸಿ, ಸಿದ್ದಿ ಸಮುದಾಯದ ಮಹಿಳೆಯರಿಗೆ ಆದಾಯ ಮಾಡಿಕೊಡುವ ಕೆಲಸಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿದೆ.
ಪ್ರವಾಸಿಗರಿಗೆ ಸಿದ್ದಿ ಪದ್ಧತಿಯ ಊಟೋಪಚಾರ : ಇನ್ನು ಲಿಂಗದ ಬೈಲು ಗ್ರಾಮದಲ್ಲಿ ಪ್ರಾರಂಭವಾಗಿರುವ ಹೋಂ ಸ್ಟೇ ಬೇರೆಲ್ಲಾ ಹೋಂ ಸ್ಟೇಗಳಿಗಿಂತ ವಿಭಿನ್ನವಾಗಿದೆ. ಈ ಹೋಂ ಸ್ಟೇಗೆ ಬರುವ ಪ್ರವಾಸಿಗರಿಗೆ ಸಿದ್ದಿ ಸಮುದಾಯದ ಮಹಿಳೆಯರು ಮೊದಲಿಗೆ ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತವನ್ನ ಮಾಡಿಕೊಳ್ಳುತ್ತಾರೆ. ಇದಾದ ನಂತರ ಸಿದ್ದಿ ಸಮುದಾಯದವರ ಆಹಾರ ಪದ್ದತಿಯಲ್ಲಿಯೇ ಊಟೋಪಚಾರ ಮಾಡಲಾಗುತ್ತದೆ. ಇದಾದ ನಂತರ ಸಮುದಾಯದ ಪರಿಚಯ ಮಾಡಿಕೊಡುತ್ತಾರೆ. ನಂತರ ಕಾಡಿನಲ್ಲಿ ಸಂಚರಿಸುವ ಮೂಲಕ ಪಕ್ಷಿ ವೀಕ್ಷಣೆ, ಪ್ರಾಣಿ ವೀಕ್ಷಣೆ, ಕಾಡಿನ ಜೊತೆ ಸಿದ್ದಿಗಳ ಒಡನಾಟದ ಪರಿಚಯ ಮಾಡಿಕೊಡಲಾಗುತ್ತದೆ.
ಇದಲ್ಲದೇ ಕಾಡಿನಲ್ಲಿರುವ ಔಷದಿ ಸಸ್ಯಗಳ, ಗಿಡಮರಗಳ ಪರಿಚಯ ಮಾಡಿಕೊಡಲಾಗುತ್ತದೆ. ರಾತ್ರಿ ವೇಳೆ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಮಾಡುವ ಮೂಲಕ ಬಂದ ಪ್ರವಾಸಿಗರನ್ನ ರಂಜಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಪ್ರವಾಸಿಗರು ಸಿದ್ದಿ ಸಮುದಾಯದ ಬಗ್ಗೆ ತಿಳಿಯಲು ಈ ಹೋಂ ಸ್ಟೇಗೆ ಬನ್ನಿ ಎನ್ನುತ್ತಾರೆ ಸಮುದಾಯದ ಮಹಿಳೆಯರು.
ಹೋಂ ಸ್ಟೇಗೆ ಡಮಾಮಿ ಎಂದು ಹೆಸರು: ಸಿದ್ದಿ ಸಮುದಾಯದ ಮಹಿಳೆಯರ ಜೀವನೋಪಾಯಕ್ಕಾಗಿ ಲಿಂಗದ ಬೈಲು ಗ್ರಾಮದಲ್ಲಿ ಮಾಡಿರುವ ಈ ಹೋಂ ಸ್ಟೇ ಯಲ್ಲಾಪುರ ಪಟ್ಟಣದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಬಸ್ನ ವ್ಯವಸ್ಥೆ ಸಹ ಇದೆ. ಈ ಹೋಂ ಸ್ಟೇಗೆ ಡಮಾಮಿ ಎಂದು ಹೆಸರನ್ನ ಇಡಲಾಗಿದೆ.
ಒಟ್ಟಿನಲ್ಲಿ ಅತಿ ಹಿಂದುಳಿದ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯರ ಜೀವನೋಪಾಯಕ್ಕಾಗಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮಾಡಿರುವ ವಿಭಿನ್ನ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು. ಈ ಪ್ರಯತ್ನ ಯಶಸ್ವಿಯಾಗಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಿದ್ದಿ ಸಮುದಾಯ ಇಂತಹ ಅನೇಕ ಹೋಂ ಸ್ಟೇಗಳನ್ನ ಪ್ರಾರಂಭಿಸಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಕಾರಣವಾಗಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ: ಸಿದ್ದಿಗಳಿಗೆ ಪೌಷ್ಠಿಕ ಆಹಾರ ವಿತರಣೆ ವಿಳಂಬ.. ಸಮುದಾಯದ ಮುಖಂಡರಿಂದ ಪ್ರತಿಭಟನೆ ಎಚ್ಚರಿಕೆ