ರಾಯಚೂರು: ಸಿಎಂ ಸಿದ್ದರಾಮಯ್ಯ ಹೇಳುವುದೆಲ್ಲಾ ಬರೀ ಉಲ್ಟಾನೇ, ಜೀವನದಲ್ಲಿ ಅವರು ಯಾವತ್ತೂ ನಿಜ ಹೇಳಿಲ್ಲ. ಸಿದ್ದರಾಮಯ್ಯ ತಾವೆಲ್ಲ ಸುಳ್ಳುಗಾರರು, ಬಿಜೆಪಿಯವರು ಒಳ್ಳೆಯವರು ಎನ್ನುವ ಭಾವನೆಯಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಮೋಶನ್ನಲ್ಲಿ ಬಿಜೆಪಿಯವರನ್ನು ಹೊಗಳುವ ಕೆಲಸ ಮಾಡ್ತಾರೆ, ನಾನು 40 ವರ್ಷದಿಂದ ಸಿದ್ದರಾಮಯ್ಯ ಅವರನ್ನು ನೋಡುತ್ತಿರುವೆ. ಅವರ ಎಲ್ಲ ಮುಖಗಳು ನನಗೆ ಗೊತ್ತಿದೆ ಎಂದು ತಿಳಿಸಿದರು.
ಹಳೆಯ ಸಿದ್ದರಾಮಣ್ಣ ಅಲ್ಲ, ಈಗ ಹೊಸ ಸಿದ್ದರಾಮಣ್ಣ ಆಗಿದ್ದಾರೆ, ಅವರ ಮಾತಿಗೆ ಅಂಥ ಮಹತ್ವವಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ದೇಶದ ಒಬ್ಬ ಪ್ರಧಾನಮಂತ್ರಿ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದ್ರೆ ಅವರ ಸ್ಟ್ಯಾಂಡರ್ಡ್ ಏನು ಅನ್ನೋದು ಗೊತ್ತಾಗುತ್ತದೆ ಎಂದು ಸೋಮಣ್ಣ ತಿರುಗೇಟು ನೀಡಿದ್ರು.
ಪ್ರಜ್ವಲ್ ರೇವಣ್ಣ ಪ್ರಕರಣ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಆಶ್ಲೀಲ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ ಅವರು ಉಪ್ಪು ತಿಂದವನು ನೀರು ಕುಡಿಯಲೇಬೇಕು ಅಂತಾ ಹೇಳಿದ್ದಾರೆ. ಅದರಲ್ಲಿ ನಮ್ಮದು ಸಹ ಎರಡನೇ ಮಾತಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ್ದು, ಕ್ರಮ ಕೈಗೊಳ್ಳಲಾಗುತ್ತದೆ. ಈ ಪ್ರಕರಣದಿಂದ ನಮಗೆ ಯಾವುದೇ ಪರಿಣಾಮ ಬೀರಲ್ಲ ಎಂದು ಸೋಮಣ್ಣ ಹೇಳಿದ್ರು.
ಈ ಲೋಕಸಭೆ ಚುನಾವಣೆ ದೇಶದ ಚುನಾವಣೆಯಾಗಿದೆ. ದೇಶದ ಅಭಿವೃದ್ಧಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಸಹ ಬಿಜೆಪಿ ಪರವಾದ ಅಲೆಯಿದ್ದು, ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಸಚಿವ ವಿ. ಸೋಮಣ್ಣ, ನಮ್ಮ ಪಕ್ಷದ ದೊಡ್ಡ ನಾಯಕರು ಆಗಿದ್ದರು. ನುರಿತ ಹಾಗೂ ಅನುಭವಿ ರಾಜಕಾರಣಿಗಳು ಆಗಿದ್ದರು. ದೇಶದ ಬಗ್ಗೆ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣ ನಮಗೆ ತುಂಬಾ ನೋವು ಉಂಟುಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.