ಬೆಳಗಾವಿ: "ಸಿಎಂ ಸಿದ್ದರಾಮಯ್ಯ ಪ್ರತಿಯೊಂದು ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ವಾಗ್ದಾಳಿ ಮಾಡಿದರು.
ಬೆಳಗಾವಿಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಯನ್ನು ಕೊಂಡಾಡುತ್ತಿದ್ದಾರೆ. ಆದರೆ ಎಲ್ಲರಿಗೂ ಆ ಗ್ಯಾರಂಟಿ ಯೋಜನೆ ಲಭಿಸಿಲ್ಲ. ಬೆಲೆ ಏರಿಸಿ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ. ಬರಗಾಲದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ ಹೆಕ್ಟೇರ್ಗೆ 2 ಸಾವಿರ ರೂ. ಬರ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ರಾಜ್ಯದಲ್ಲಿ ಹಿಂಗಾರು, ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಭೀಕರ ಬರಗಾಲವಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಪ್ರವಾಸ ಮಾಡುತ್ತಿಲ್ಲ" ಎಂದರು.
"ಸಾಕಷ್ಟು ರಸ್ತೆಗಳು ಹದಗೆಟ್ಟಿವೆ. ರಸ್ತೆ ಸುಧಾರಣೆ ಮಾಡುವ ಮನಸ್ಸು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗಿಲ್ಲ. ಅವರು ಒಂದೇ ಒಂದು ಕಾಮಗಾರಿಗೂ ಚಾಲನೆ ನೀಡಿಲ್ಲ" ಎಂದು ಆರೋಪಿಸಿದ ಅಶ್ವತ್ಥನಾರಾಯಣ, ಸತೀಶ್ ಅವರು ಲೋಕೋಪಯೋಗಿ ಸಚಿವರು ಅಂತಾನೆ ರಾಜ್ಯದ ಜನರಿಗೆ ಗೊತ್ತಿಲ್ಲ. ಕೇವಲ ಸಚಿವ ಸ್ಥಾನ, ಡಿಸಿಎಂ ವಿಚಾರಕ್ಕೆ ಮಾತ್ರ ಅವರು ಸುದ್ದಿಯಲ್ಲಿರುತ್ತಾರೆ" ಎಂದು ಟೀಕಿಸಿದರು.
"ಸಿದ್ದರಾಮಯ್ಯನವರು ಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ನೀತಿ ಆಯೋಗ, ಜಿಎಸ್ಟಿ ಸಭೆಗೆ ಗೈರಾಗಿದ್ದಾರೆ. ಬೇರೆ ರಾಜ್ಯದ ಕಾಂಗ್ರೆಸ್ ಸಿಎಂಗಳು ಸಭೆಗೆ ಹೋಗುತ್ತಾರೆ. ಆದರೆ ಇವರು ಹೋಗದೆ ಕೃಷ್ಣಭೈರೇಗೌಡರನ್ನು ಸಭೆಗೆ ಕಳುಹಿಸುತ್ತಾರೆ. ವಿನಾಕಾರಣ ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ" ಎಂದು ಹೇಳಿದರು.
"ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಸರ್ಕಾರ ಕೂಡ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಬೇಕು. ಆದರೆ, ಈವರೆಗೂ ಸರ್ಕಾರ ಬದ್ಧತೆ ತೋರಿಸುತ್ತಿಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ಡಿಪಿಆರ್ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಲ್ಲಿದೆ. ಇನ್ನು ನೀರಾವರಿ ಸಚಿವರು ಕೇವಲ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾತನಾಡುತ್ತಿದ್ದು, ನೀರಾವರಿ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಹಿಮಾಚಲ, ರಾಜಸ್ಥಾನದಲ್ಲಿ ಸಮಸ್ಯೆಗಳಾದಾಗ ಅಲ್ಲಿಗೆ ಹೋಗುವ ಡಿಕೆಶಿ ಮಹದಾಯಿ ಬಗ್ಗೆ ವಿಚಾರ ಮಾಡುತ್ತಿಲ್ಲ. ನನ್ನ ನೀರು ನನ್ನ ಹಕ್ಕು ಎಂದು ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡುತ್ತಾರೆ. ಈಗ ಮಾರ್ಚ್, ಏಪ್ರಿಲ್ ತಿಂಗಳಲ್ಲಿ 5 ಟಿಎಂಸಿ ನೀರು ಬಿಡುವಂತೆ ಆದೇಶ ಮಾಡಲಾಗಿದೆ. ಆದರೂ ಅಣ್ಣ ತಮ್ಮ ಸುಮ್ಮನೆ ಕುಳಿತಿದ್ದಾರೆ" ಎಂದು ಟೀಕಿಸಿದರು.
"ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸಾಕಷ್ಟು ಕೊಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಗೃಹ ಸಚಿವರು ಡಾ.ಜಿ.ಪರಮೇಶ್ವರ ಅವರೋ ಅಥವಾ ಪ್ರಿಯಾಂಕ್ ಖರ್ಗೆ ಅವರೋ?. ಪ್ರತಿಯೊಂದರಲ್ಲೂ ಪ್ರಿಯಾಂಕ್ ಖರ್ಗೆ ಮೂಗು ತೋರಿಸುತ್ತಿದ್ದಾರೆ" ಎಂದರು.
ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, "ಅದು ಕಾಂತರಾಜ ವರದಿಯೋ? ಜಯಪ್ರಕಾಶ ಹೆಗಡೆ ವರದಿಯೋ ಗೊತ್ತಿಲ್ಲ. ಅದರಲ್ಲಿ ಏನಿದೆ ಎಂದು ನೋಡಿಕೊಂಡು, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ಸಂಸದೆ ಮಂಗಲ ಅಂಗಡಿ, ಮಾಜಿ ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ, ಮುಖಂಡರಾದ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಮಾದಮ್ಮನವರ, ನಗರ ಸೇವಕ ಹಣಮಂತ ಕೊಂಗಾಲಿ ಇದ್ದರು.
ಇದನ್ನೂ ಓದಿ: ಪ್ರೀಮಿಯಂ ಎಫ್‌ಎಆರ್ ಪದ್ಧತಿಯಿಂದ ಸಾರ್ವಜನಿಕರಿಗೆ ಭಾರಿ ಸಮಸ್ಯೆ: ಎನ್.ಆರ್ ರಮೇಶ್