ಮೈಸೂರು: ಮೈಸೂರು ದಸರಾ ಕುಸ್ತಿ ಪಂದ್ಯಾವಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ದೊಡ್ಡಕರೆ ಮೈದಾನ ಆವರಣದ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಾವಣಗೆರೆ ಕ್ರೀಡಾನಿಲಯದ ಪೈಲ್ವಾನ್ ರಾಘವೇಂದ್ರ ಮತ್ತು ಮೈಸೂರಿನ ಮಹದೇವಪುರ ಪೈಲ್ವಾನ್ ವಿಕಾಶ್ ಅವರ ಭುಜ ತಟ್ಟುವ ಮೂಲಕ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿತು. ಬಾಲಕಿಯರ ಮೊದಲೆರಡು ಕುಸ್ತಿ ಪಂದ್ಯದಲ್ಲಿ ಮಂಡ್ಯದ ಪೈಲ್ವಾನ್ ಸುಹಾನ ಬಾನು ವಿರುದ್ಧ ಗಾಣಿಗನಕೊಪ್ಪಲುವಿನ ಪೈಲ್ವಾನ್ ನಂದಿನಿ ಹಾಗೂ ಮಳವಳ್ಳಿಯ ಪೈಲ್ವಾನ್ ಎಂ.ಕೆ.ಮೋನಿಕಾ ವಿರುದ್ಧ ರಮ್ಮನಹಳ್ಳಿಯ ಪೈಲ್ವಾನ್ ಯಶಸ್ವಿನಿ ಜಯಭೇರಿ ಬಾರಿಸಿದರು. ಈ ಬಾರಿ ದಸರಾ ಮಹೋತ್ಸವದಲ್ಲಿ ಕುಸ್ತಿ ಪಂದ್ಯಾವಳಿ ಅಭಿಮಾನಿಗಳಿಗೆ ರೋಮಾಂಚನ ನೀಡಿತು.
ದಸರಾ ಸಿಎಂ ಕಪ್ ಕ್ರೀಡಾಕೂಟ: ಇದಕ್ಕೂ ಮುನ್ನ ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೂ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾಪಟುಗಳಲ್ಲಿ ಶ್ರಮ, ಏಕಾಗ್ರತೆ, ಗುರಿ, ಗುಣಮಟ್ಟದ ತರಬೇತಿ ಸಿಕ್ಕಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಯುವಜನತೆ ಕ್ರೀಡೆಯೊಂದಿಗೆ ಓದಿನ ಕಡೆಗೂ ಸೂಕ್ತ ಗಮನ ಹರಿಸಬೇಕು. ಎಲ್ಲ ಕ್ರೀಡಾಪಟುಗಳನ್ನು ಶುಭ ಹಾರೈಸುತ್ತೇನೆ. ಹರ್ಮನ್ ಪ್ರಿತ್ ಸಿಂಗ್ ಅವರು ಭಾರತ ಹಾಕಿ ತಂಡದ ನಾಯಕರಾಗಿದ್ದು, ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 200ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಕಳೆದ ಒಲಿಂಪಿಕ್ಸ್ನಲ್ಲಿ ಇವರ ನಾಯಕತ್ವದಲ್ಲಿ ಭಾರತ ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಸಿಎಂ ಹಾರೈಸಿದರು.
ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹರ್ಮನ್ ಪ್ರಿತ್ ಸಿಂಗ್ ಅವರನ್ನು ಕ್ರೀಡಾಕೂಟಕ್ಕೆ ಆಹ್ವಾನಿಸಲಾಗಿತ್ತು.
ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ, ದಸರಾ ಕುಸ್ತಿ ಉಪಸಮಿತಿ ಉಪ ವಿಶೇಷಾಧಿಕಾರಿ ಎಲ್.ನಾಗೇಶ್, ಕಾರ್ಯಾಧ್ಯಕ್ಷ ಡಾ.ಎನ್.ಸಿ.ವೆಂಕಟರಾಜು, ಕಾರ್ಯದರ್ಶಿ ಬಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.