ಬಳ್ಳಾರಿ : ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿವಿಯಿಂದ ನಟಿ ಉಮಾಶ್ರೀ ಹಾಗೂ ಮರಣೋತ್ತರವಾಗಿ ಎಸ್. ಕೆ ಮೋದಿ, ಮಠಾಧೀಶ ಚಂದ್ರಮೌಳೇಶ್ವರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ವಿವಿಯ ಆವರಣದಲ್ಲಿ ಆಯೋಜನೆ ಮಾಡಿದ್ದ 12ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ. ಸಿ ಸುಧಾಕರ್ ಪ್ರದಾನ ಮಾಡಿದರು. ಪ್ರೊ. ಎಸ್. ಎಂ ಶಿವಪ್ರಸಾದ್, ಕುಲಪತಿ ಪ್ರೊ. ಮುನಿರಾಜ್ ಸಾಥ್ ನೀಡಿದರು.
ಉಮಾಶ್ರೀ ಅವರು ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಸಾಧನೆ ಮಾಡಿದ್ದರೆ, ಕೈಗಾರಿಕೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಕೈ ಜೋಡಿಸಿದ ಎಸ್. ಕೆ ಮೋದಿ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ನಿರಂತರ ಸೇವೆಗಾಗಿ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.
ಮರಣೋತ್ತರವಾಗಿ ಎಸ್. ಕೆ ಮೋದಿ ಪರವಾಗಿ ಅವರ ಪತ್ನಿ ಎಸ್. ಕೆ ಮಂಜು ಹಾಗೂ ಚಂದ್ರಮೌಳೇಶ್ವರ ಸ್ವಾಮೀಜಿ ಪರವಾಗಿ ಅವರ ಮಠದ ಉತ್ತರಾಧಿಕಾರಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕ, ವಿವಿಧ ವಿಭಾಗಗಳ ಒಟ್ಟು 36 ಸಂಶೋಧನಾರ್ಥಿಗಳಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು. ಎಲ್ಲಾ ವಿಭಾಗಗಳ ಸ್ನಾತಕ ಪದವಿಯ 56 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 69 ಸೇರಿ ಒಟ್ಟು 125 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.
03 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಮಾಹಿತಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಉಮಾ ಪಿ. ಹಾಗೂ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ನಾಗರಾಜ ಕೆ. ಬಿ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ದೌಲತ್ ಬಾನು ಇವರುಗಳು ತಲಾ ಮೂರು ಚಿನ್ನದ ಪದಕ ಪಡೆದುಕೊಂಡರು.
02 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಮಾಹಿತಿ: ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದ ಎ. ಕೆ ಹುಲಿಗೆಮ್ಮ, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಿಯಾಂಕ ಎ, ಭೌತಶಾಸ್ತ್ರ ವಿಭಾಗದ ಪೂಜಾ ಹಿರೇಹಾಳ್, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಮಾಜಶಾಸ್ತ್ರದ ಸಾಲುಂಕೆ ಮಿತ್ರಾ ಹಾಗೂ ವೀರಶೈವ ಮಹಾವಿದ್ಯಾಲಯದ ಬಿಎಸ್‌ಸಿ ವಿಭಾಗದ ಶ್ರೇಯಾ ಬಿ. ಪಿ ಇವರುಗಳು ತಲಾ ಎರಡು ಚಿನ್ನದ ಪದಕ ಪಡೆದುಕೊಂಡರು.
ಇದನ್ನೂ ಓದಿ : ಶ್ರೀಕೃಷ್ಣದೇವರಾಯ ವಿವಿಯಿಂದ ಉಮಾಶ್ರೀ ಸೇರಿ ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ - Sri Krishnadevaraya University