ಹುಬ್ಬಳ್ಳಿ : ಸಿದ್ದರಾಮಯ್ಯ ಒಳ್ಳೆ ಮುಖ್ಯಮಂತ್ರಿ, ಮುಡಾ ಹಗರಣದಲ್ಲಿ ಅವರ ಹೆಸರು ತಂದು ಯಡಿಯೂರಪ್ಪ ಅವರಂತೆ ಕಣ್ಣೀರು ಕಪಾಳಕ್ಕೆ ತರಿಸುವಂತೆ ಮಾಡಿ ಅಧಿಕಾರದಿಂದ ಇಳಿಸಿದಂತೆ ಇವರಿಗೆ ಮಾಡಬಾರದು ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ಧರಾಮಯ್ಯ, ಯಡಿಯೂರಪ್ಪ ಮೇಲೆ ಆರೋಪ ವಿಚಾರಗಳು ಸರಿಯಾದವಲ್ಲ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ ಮಾಡುವುದು ಸರಿಯಲ್ಲ. ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪ ಮೇಲಿನ ಆರೋಪ ಸರಿಯಲ್ಲ. ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ಕೊನೆಯ ಗಳಿಗೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೊಂದು ನಿಜಕ್ಕೂ ಬೇಸರದ ಸಂಗತಿ. 70, 80 ವಯಸ್ಸಿಗೆ ಈ ಆರೋಪ ಸರಿಯಲ್ಲ. ರಾಜಕೀಯ ಇದೆ. ಆದರೆ, ಹೊಲಸು ರಾಜಕಾರಣ ಮಾಡಬಾರದು ಎಂದರು.
ತಿರುಪತಿಯಲ್ಲಿ ಲಾಡುವಿನಲ್ಲಿ ಮಾಂಸದ ಕೊಬ್ಬು ಮಿಶ್ರಣ ಕುರಿತ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಲಾಡುವಿನಲ್ಲಿ ಏನಾದರೂ ಮಾಂಸ, ಚರ್ಬಿ ಬೆರಕೆ ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗಬೇಕು. ಕಾನೂನು ಪ್ರಕಾರ ದಂಡ ಹಾಕಬೇಕು. ಒಂದು ಒಳ್ಳೆಯ ದೇವಸ್ಥಾನ, ಇಂತಹ ಪವಿತ್ರವಾದ ಸ್ಥಳದಲ್ಲಿ ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಭಕ್ತರಿಗೆ ಹಂಚುವ ಲಾಡುವಿನಲ್ಲಿ ಮಾಂಸದ ಚರ್ಬಿ ಹಾಗೂ ಹಂದಿ ಬಿಸಿ ಮಾಂಸ ಬೆರಕೆ ಸರಿಯಲ್ಲ. ಈ ರೀತಿಯಲ್ಲಿ ಮಾಡುವವರಿಗೆ ಯಾವುದೇ ರೀತಿಯ ಕ್ಷಮಾಪಣೆ ಇರಬಾರದು. ಕಾನೂನಿನ ಅನ್ವಯ ಕಠಿಣ ಕ್ರಮ ಆಗಲಿ. ನಾವು ಕೂಡ ಮುಂದೆ ಹೋರಾಟ ನಡೆಸುತ್ತೇವೆ. ದೇವರು ಸಮೃದ್ಧಿ ಕೊಟ್ಟಿದ್ದಾರೆ. ಇದಕ್ಕೆ ಯಾಕೆ ಹೀಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಇನ್ನು, ಚಿಕ್ಕ ಚಿಕ್ಕ ಮಕ್ಕಳು ಸಹ ಇಂದು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದೊಂದು ಆತಂಕಕಾರಿ ವಿಷಯ. ಹೀಗಾಗಿ ತಜ್ಞ ವೈದ್ಯರಿಂದ ವೆಬಿನಾರ್ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಗುಣಧರನಂದಿ ಮಹಾರಾಜರು ತಿಳಿಸಿದರು.