ಹಾಸನ: "ಕೇಳ್ರಪ್ಪೋ ಕೇಳಿ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ರೋಗಿಗಳ ಪ್ರಾಣ ಇಲ್ಲಿ ಲೆಕ್ಕಕ್ಕಿಲ್ಲ. ಆಸ್ಪತ್ರೆಗೆ ಯಾರೂ ಬರ್ಬೇಡ್ರಪ್ಪೋ.." ಎಂದು ತಮಟೆ ಬಾರಿಸುವ ಮೂಲಕ ರೈತಸಂಘ ಮತ್ತು ಕೆಲವು ಸಂಘಟನೆಗಳ ಮುಖಂಡರು ಶ್ರವಣಬೆಳಗೊಳದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಕ್ಷಣ ವೈದ್ಯರನ್ನು ನಿಯೋಜಿಸಬೇಕೆಂದು ಆಗ್ರಹಿಸಿ, ಭಾನುವಾರ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ವೈದ್ಯಕೀಯ ಸಿಬ್ಬಂದಿ ಪ್ರತಿಕ್ರಿಯಿಸಿ, "ಹೋಬಳಿ ಕೇಂದ್ರವಾಗಿದ್ದ ಶ್ರವಣಬೆಳಗೊಳದಲ್ಲಿ ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರವಿತ್ತು. ಪಟ್ಟಣ ಬೆಳೆದಂತೆ ಅದು ಸಮುದಾಯ ಕೇಂದ್ರವಾಯಿತು. ಪ್ರತಿನಿತ್ಯ ಈ ಕೇಂದ್ರದಲ್ಲಿ 200ರಿಂದ 250 ಮಂದಿ ಒಳ ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಜುಟ್ಟನಹಳ್ಳಿ, ಕಾಂತರಾಜಪುರ ಮತ್ತು ದಮ್ಮನಿಂಗಲ ಪ್ರಾಥಮಿಕ ಆಸ್ಪತ್ರೆಗಳೂ ಈ ಸಮುದಾಯ ಕೇಂದ್ರಕ್ಕೆ ಸೇರುತ್ತವೆ. ಗಡಿ ಭಾಗದ ಹೋಬಳಿಯಾಗಿರುವುದರಿಂದ ಮಂಡ್ಯ ಜಿಲ್ಲೆಯ ಅಘಲಯ, ಹೊನ್ನಾವರ, ಬಿಂಡಿಗನವಿಲೆ, ಕಿಕ್ಕೇರಿ, ಸಂತೇಬಾಚಹಳ್ಳಿಯಿಂದಲೂ ಶ್ರವಣಬೆಳಗೊಳ ಹತ್ತಿರವೆಂಬ ಕಾರಣಕ್ಕೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಆಸ್ಪತ್ರೆಗೆ ಇರುವುದು ಒಬ್ಬರೇ ವೈದ್ಯ. ಚಿಕಿತ್ಸೆಗೆ ಬರುವ ರೋಗಿಗಳು ಇನ್ನಿಲ್ಲದ ಪರದಾಟ ಅನುಭವಿಸುತ್ತಿದ್ದಾರೆ. ಒಳರೋಗಿಗಳನ್ನು ದಾಖಲಿಸಿಕೊಳ್ಳಲೂ ಇಲ್ಲಿ ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದರು.
"ನನ್ನನ್ನು ಬಿಟ್ಟರೆ ಇಲ್ಲಿ ಖಾಯಂ ವೈದ್ಯರು ಯಾರೂ ಇಲ್ಲ. ಆಸ್ಪತ್ರೆಯಲ್ಲಿ ಸದ್ಯ ಓರ್ವ ವೈದ್ಯರಿದ್ದು ಪ್ರತಿನಿತ್ಯ 200ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ಮಾಡಬೇಕು. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳೂ ಹೆಚ್ಚಾಗುತ್ತಿವೆ. ನಾನೂ ಕೂಡ 2 ದಿನದಿಂದ ಜ್ವರದಿಂದ ಬಳಲುತ್ತಿದ್ದೇನೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಕರ್ತವ್ಯ ನಿರ್ವಹಿಸಿದ್ದೇನೆ. ಇದೇ ಸ್ಥಿತಿಯಲ್ಲಿ ಹೆರಿಗೆ ಕೂಡ ಮಾಡಿಸಿದ್ದೇನೆ. ಈ ವೇಳೆ ಸುಸ್ತಾಗಿದ್ದು ನನ್ನ ಸಹಾಯಕರು ನನಗೆ ಚಿಕಿತ್ಸೆ ನೀಡಿದ್ದಾರೆ. ಮೇಲಾಧಿಕಾರಿಗೆ ಹೆಚ್ಚುವರಿ ವೈದ್ಯರನ್ನು ನಿಯೋಜನೆ ಮಾಡುವಂತೆ ಮನವಿ ಮಾಡಿದ್ದೇನೆ. ಇಲ್ಲಿ ಕನಿಷ್ಠ ಮೂವರು ವೈದ್ಯರ ಅಗತ್ಯವಿದೆ. ಈ ಹಿಂದಿದ್ದ ಇಬ್ಬರು ವೈದ್ಯರಲ್ಲಿ ಒಬ್ಬರನ್ನು ಬೇರೆಡೆ ವರ್ಗಾವಣೆ ಮಾಡಿದ್ದು, ಮತ್ತೊಬ್ಬರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಿ" ಎಂದು ಚಿಕಿತ್ಸೆ ಪಡೆಯುತ್ತಿರುವ ಡಾ.ಯುವರಾಜ್ ಮನವಿ ಮಾಡಿದರು.
"ಇತ್ತೀಚಿಗೆ ದೂರದ ಮಹಾರಾಷ್ಟ್ರದಿಂದ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಕುಡುಗೋಲು, ಆರೆ, ಬಾಚಿ, ನೇಗಿಲು ಮಾಡಿಕೊಡಲು ಬಂದಿದ್ದ ಕುಟುಂಬವೊಂದರ ಹೆಣ್ಣುಮಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನು ಇದೇ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರಿಲ್ಲದ ಕಾರಣ ಶುಶ್ರೂಷಕರು ಕಂಗಾಲಾಗಿದ್ದರು. ಕೊನೆಗೆ ನಿತ್ರಾಣಗೊಂಡಿದ್ದ ಡಾ.ಯುವರಾಜ್ ಆಕೆಯ ಪರಿಸ್ಥಿತಿ ನೋಡಿ ತಾವೇ ತಡರಾತ್ರಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ" ಎಂದು ವೈದ್ಯಕೀಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಸಾಗರ್ ಗೌಡ ಎಂಬವರ ನೇತೃತ್ವದಲ್ಲಿ ರೈತ ಸಂಘದವರು ತಮಟೆ ಬಾರಿಸುವ ಮೂಲಕ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಸಾಗರ್ ಗೌಡ, "ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ಯುವರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ, ಸದ್ಯ ರೋಗಿಗಳ ತಪಾಸಣೆಗೆ ಒಬ್ಬ ವೈದ್ಯರೂ ಇಲ್ಲಿಲ್ಲ. ಈ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗಳು ಐವರು ವೈದ್ಯರನ್ನು ನಿಯೋಜನೆ ಮಾಡಬೇಕು" ಎಂದು ಒತ್ತಾಯಿಸಿದರು.