ಬೀದರ್: ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಲು ಸಾಗಿಸುತ್ತಿದ್ದ ಹಣವನ್ನು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿ ಪರಾರಿಯಾದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಈ ವೇಳೆ ಎಸ್‌ಬಿಐ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ಗುಂಡು ಹಾರಿಸಿದ್ದರಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್ ಮೇನ್ ಬ್ರ್ಯಾಂಚ್ ಮುಂದೆಯೇ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನ ಗಿರೀಶ್ ಎಂದು ಗುರುತಿಸಲಾಗಿದೆ. ಶಿವಕುಮಾರ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಬ್ಯಾಂಕಿನ ಕಚೇರಿ ಎದುರು ಗಿರೀಶ್ ಮೃತದೇಹ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತ್ಯಕ್ಷದರ್ಶಿ ಹೇಳಿದ್ದೇನು? ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಎಂದಿನಂತೆ ಬ್ಯಾಂಕ್ನಿಂದ ಎಟಿಎಂಗೆ ಹಣ ವರ್ಗಾಯಿಸಲು ವಾಹನದಲ್ಲಿ ಬಂದಿದ್ದರು. ಆಗ ಬೈಕಿನಲ್ಲಿ ಬಂದ ಅಪರಿಚಿತರು ಹಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಹಣ ಕೊಡದಿದ್ದಾಗ ಆರು ಸುತ್ತು ಫೈರಿಂಗ್ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಪ್ರದೀಪ ಗುಂಟೆ, ಅಡಿಷನಲ್ ಎಸ್ಪಿ ಚಂದ್ರಕಾಂತ ಪೂಜಾರಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬ್ಯಾಂಕ್ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಸುಮಾರು 10:30 ಗಂಟೆಗೆ ಎಸ್‌ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಎಟಿಎಂಗೆ ಹಾಕಲು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ತೆರಳುತ್ತಿದ್ದರು. ಈ ವೇಳೆ, ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಗನ್ ಫೈರ್ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿದ್ದಾರೆ. ಭಾರಿ ಮೊತ್ತದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ. ಎಷ್ಟು ಹಣ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಪ್ರದೀಪ ಗುಂಟೆ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇದನ್ನೂ ಓದಿ : ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ದೋಚುತ್ತಿದ್ದ ಇಬ್ಬರ ಬಂಧನ - THEFT CASE