ಮುರುಡೇಶ್ವರ: ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ಮುರ್ಡೇಶ್ವರದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು. ಶಿವನ ಪಂಚಕ್ಷೇತ್ರಗಳಲ್ಲೊಂದಾದ ಶ್ರೀ ಮುರುಡೇಶ್ವರ ದೇವರಿಗೆ ಶಿವರಾತ್ರಿಯ ನಿಮಿತ್ತ ಮುಂಜಾನೆ ನಸುಕಿನ ವೇಳೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ದೇವಸ್ಥಾನದ ಹೊರಾಂಗಣದವರೆಗೂ ಸರದಿ ಸಾಲು ಕಂಡು ಬಂದಿತ್ತು.
ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆಯಿತು. ಪರಶಿವನಿಗೆ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಮುಂತಾದ ಕಾರ್ಯಗಳು ನಡೆದವು. ಮುರುಡೇಶ್ವರಕ್ಕೆ ಭೇಟಿ ನೀಡಿದ ಭಕ್ತಾಧಿಗಳು ಸಮುದ್ರಸ್ನಾನ ಮಾಡಿ ದೇವರಿಗೆ ವಿವಿಧ ರೂಪದಲ್ಲಿ ಅಭಿಷೇಕದೊಂದಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ದೇವರ ದರ್ಶನಕ್ಕೆ ಬೆಳಗ್ಗೆಯಿಂದಲೇ ಭಕ್ತರು ದೂರುಗಳಿಂದ ಬಂದಿದ್ದರು. ಸಮುದ್ರತೀರ ಮತ್ತು ದೇವಸ್ಥಾನದ ಸುತ್ತಮುತ್ತ ಜನಜಾತ್ರೆಯೇ ನೆರೆದಿತ್ತು.
ಲಂಕಾಧಿಪತಿ ರಾವಣನ ತಾಯಿ ಮರಳಿನ ಲಿಂಗ ತಯಾರಿಸಿ ಪೂಜಿಸಬೇಕು ಎನ್ನುವಷ್ಟರಲ್ಲಿ ಅಲೆಯೊಂದು ಲಿಂಗವನ್ನು ಕೊಚ್ಚಿಕೊಂಡು ಹೋಯಿತು. ಇದರಿಂದ ವೃತನಿರಶನಳಾಗಿ ಕುಳಿತ ತನ್ನ ತಾಯಿಯ ಸಲುವಾಗಿ ರಾವಣ ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗ ಪಡೆದು ಹಿಂತಿರುಗುತ್ತಿದ್ದಾಗ, ಮಹಾವಿಷ್ಣು ತನ್ನ ಚಕ್ರದಿಂದ ಸೂರ್ಯನನ್ನು ಮರೆಯಾಗಿಸಿ ಸಂಜೆಯಾಗಿಸಿದ. ಬಲು ಕರ್ಮಠನಾದ ರಾವಣನು ಕೈಯಲ್ಲಿದ್ದ ಆತ್ಮಲಿಂಗವನ್ನು ಹತ್ತಿರದಲ್ಲೇ ವಟುವಿನ ರೂಪದಲ್ಲಿದ್ದ ಗಣಪನ ಕೈಯಲ್ಲಿಟ್ಟನು. ಸಂಧ್ಯಾವಂದನೆಗೆ ಮರಳುವ ಮುನ್ನವೇ ಗಣಪನು ಲಿಂಗವನ್ನು ಭೂಮಿಯಲ್ಲಿ ಪ್ರತಿಷ್ಠಾಪಿಸಿದನು.
ಅದು ಈಗ ಭೂಕೈಲಾಸವೆಂದು ಪ್ರತೀತಿಯಾದ ಗೋಕರ್ಣ ಕ್ಷೇತ್ರ. ಭೂಮಿ ಮೇಲೆ ಲಿಂಗ ಪ್ರತಿಷ್ಠಾಪಿಸಿದ್ದರಿಂದ ಕೋಪಗೊಂಡು ರಾವಣನು ಲಿಂಗವನ್ನು ಕಿತ್ತು ಎಸೆದಾಗ ಅದು ಶಿವನ ಪಂಚಕ್ಷೇತ್ರ (ಗೋಕರ್ಣೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ, ಮುರುಡೇಶ್ವರ) ಗಳಾಗಿ ಪ್ರಸಿದ್ಧಿಯಾಯಿತು. ಮುರುಡು ಮುರುಡಾಗಿ ಬಂದು ಬಿದ್ದ ಶಿವನ ಲಿಂಗದಿಂದಾಗಿ ಭಟ್ಕಳ ತಾಲೂಕಿನಲ್ಲಿರುವ ಈ ಕ್ಷೇತ್ರ ಮುರ್ಡೇಶ್ವರ ಎಂದು ಪ್ರಸಿದ್ಧಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಇಂದು ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಿಯೂ ಖ್ಯಾತಿ ಪಡೆದಿದೆ. ನಿತ್ಯ ಸಾವಿರಾರು ಭಕ್ತಾಧಿಗಳು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಮತ್ತಷ್ಟು ಜನಜಂಗುಳಿ ನೆರೆದಿರುತ್ತದೆ. ದರ್ಶನಕ್ಕೆ ಬಂದಂತಹ ಎಲ್ಲ ಭಕ್ತರಿಗೂ ಪಾನೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ತಾಲೂಕಿನ ವಿವಿಧೆಡೆ ಶಿವರಾತ್ರಿ ಸಂಭ್ರಮ: ತಾಲ್ಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಲ ಚೋಳೇಶ್ವರ, ಬಂದರ್‌ನ ಕುಟುಮೇಶ್ವರ, ಮಾರುಕೇರಿಯಲ್ಲಿ ಇರುವ ಈಶ್ವರ ದೇವಸ್ಥಾನ, ಸೋನಾರಕೇರಿಯಲ್ಲಿ ಇರುವ ವಿರೂಪಾಕ್ಷ ದೇವಸ್ಥಾನಗಳಿಗೆ ಸ್ಥಳೀಯ ಭಕ್ತರು ಭೇಟಿ ನೀಡಿ, ಪೂಜೆ ಪುನಸ್ಕಾರ ಸಲ್ಲಿಸಿದರು. ಸಂಜೆಯ ವೇಳೆಗೆ ಮುರುಡೇಶ್ವರದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಭಕ್ತರ ಪೂಜೆ, ಪುನಸ್ಕಾರಕ್ಕೆ ಅನುಕೂಲವಾಗುವಂತೆ ದೇವಸ್ಥಾನದಲ್ಲಿ ಸಿಬ್ಬಂದಿ ಹಾಗೂ ಉಪಾಧಿವಂತರು ಸಹಕರಿಸಿದರು. ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.
ಇದನ್ನೂ ಓದಿ: ಕನ್ನಡತಿ ಸುಧಾ ಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ