ಶಿವಮೊಗ್ಗ: ಶಿವಮೊಗ್ಗ - ಚೆನ್ನೈಮಧ್ಯೆ ವಾರದಲ್ಲಿ ಎರಡು ಬಾರಿ ಓಡಾಡುವ ರೈಲಿಗೆ ಸಂಸದ ಬಿ.ವೈ ರಾಘವೇಂದ್ರ ಹಸಿರು ನಿಶಾನೆ ತೋರಿದ್ದಾರೆ. ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಮಲೆನಾಡಿನಿಂದ ತಮಿಳುನಾಡಿನ ನೇರ ರೈಲು ಸಂಪರ್ಕಕ್ಕೆ ಸಂಸದರು ಚಾಲನೆ ನೀಡಿದರು.
ಚೆನ್ನೈನಿಂದ ಪ್ರತಿ ಶುಕ್ರವಾರ ರಾತ್ರಿ 11:30 ಕ್ಕೆ (12691/12692) ಸಂಖ್ಯೆಯ ರೈಲು ಹೊರಡುತ್ತದೆ. ಮರುದಿನ ಮಧ್ಯಾಹ್ನ 11:35 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಸಂಜೆ 5:30ಕ್ಕೆ ಹೊರಡುವ ರೈಲು ಮರುದಿನ ಬೆಳಗಿನ ಜಾವ 4:55ಕ್ಕೆ ಚೆನ್ನೈ ಎಂಜಿಆರ್ ರೈಲು ನಿಲ್ದಾಣ ತಲುಪಲಿದೆ.
ಈ ರೈಲು ಬಂಗಾರ ಪೇಟೆಯ ಮೂಲಕ ಚಲಿಸುತ್ತದೆ. ಸದ್ಯಕ್ಕೆ ಇದು ಪ್ರಾಯೋಗಿಕವಾಗಿ ಪ್ರಾರಂಭವಾಗಿದೆ. ರೈಲಿಗೆ ಚಾಲನೆ ನೀಡಿ ಮಾತನಾಡಿದ ಸಂಸದ ರಾಘವೇಂದ್ರ ಅವರು, ಮುಂಬರುವ ನಾಲ್ಕೈದು ವರ್ಷದಲ್ಲಿ ಶಿವಮೊಗ್ಗದಿಂದ ದೇಶದ ಎಲ್ಲಾ ಕಡೆ ನೇರವಾದ ರೈಲು ಓಡಾಡುತ್ತದೆ. ಇದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಮುಂದಿನ 5 ವರ್ಷದಲ್ಲಿ ಶಿವಮೊಗ್ಗ ಮಧುಮಗಳಂತೆ ತಯಾರಾಗುತ್ತದೆ ಎಂದರು.
ಶಿವಮೊಗ್ಗ - ರಾಣೆಬೆನ್ನೂರು ರೈಲ್ವೆ ಕಾಮಗಾರಿಯು 2.500 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಇದರಿಂದ ದೇಶದ ರಾಜಾಸ್ಥಾನ ಸೇರಿದಂತೆ ಉತ್ತರದ ಅನೇಕ ರಾಜ್ಯಗಳಿಗೆ ಅಲ್ಲದೆ ಈಶಾನ್ಯ ಭಾಗಕ್ಕೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೆ ಶಿವಮೊಗ್ಗ, ಸಾಗರ ಹಾಗೂ ತಾಳಗುಪ್ಪ ರೈಲ್ವೆ ನಿಲ್ದಾಣವು 90 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆಯಾಗಿದೆ ಎಂದು ಹೇಳಿದರು.
ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಆಕ್ಸಿಲೇಟರ್ ಬ್ರಿಡ್ಜ್ ಶೀಘ್ರದಲ್ಲಿ ಮಾಡಲಾಗುತ್ತದೆ. ಕೊಂಕಣ ರೈಲು ಸಂಪರ್ಕ ಅಸಾಧ್ಯವಾದ ಕಾರಣಕ್ಕೆ ಈಗ ಶಿವಮೊಗ್ಗದಿಂದ ಮಂಗಳೂರಿಗೆ ಚಿಕ್ಕಮಗಳೂರು ಮಾರ್ಗವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಆಗ ಎಲ್ಲರೂ ಮೀನು ತಿನ್ನಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಶಾಸಕರಾದ ಶಾರದ ಪೂರ್ಯನಾಯ್ಕ್, ಎಂಎಲ್ಸಿಗಳಾದ ಡಿ. ಎಸ್ ಅರುಣ್, ಧನಂಜಯ್ ಸರ್ಜಿ ಸೇರಿದಂತೆ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ : ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ: ಕೇಂದ್ರ ಸಚಿವ ವಿ.ಸೋಮಣ್ಣ - Railway Station Upgradation