ETV Bharat / state

ತುಂಡಾಗಿದ್ದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ ಶಿವಮೊಗ್ಗ ವೈದ್ಯರು: ಅಪಘಾತದಲ್ಲಿ ಅಂಗಾಂಗ ಕಟ್ ಆದ್ರೆ ಹೀಗೆ ಮಾಡುವಂತೆ ಸಲಹೆ - HAND REATTACHED - HAND REATTACHED

ಸತತ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ವ್ಯಕ್ತಿಯ ತುಂಡಾದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಲಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿರುವ ರೋಗಿ ಇದೀಗ ಚೇತರಿಸಿಕೊಂಡಿದ್ದಾರೆ. ಅಲ್ಲದೆ ಕೈ ಚಲನವಲನವೂ ಚೆನ್ನಾಗಿದೆ.

reattached hand
ಮರು ಜೋಡಿಸಿದ ಕೈ (ETV Bharat)
author img

By ETV Bharat Karnataka Team

Published : Aug 24, 2024, 7:09 AM IST

ಶಿವಮೊಗ್ಗ: ಎರಡು ತುಂಡಾಗಿದ್ದ ಕೈಗೆ ಶಸ್ತ್ರಚಿಕಿತ್ಸೆ ನಡೆಸಿ, ಮರು ಜೋಡಿಸುವ ಮೂಲಕ ಶಿವಮೊಗ್ಗದ ಖಾಸಗಿ ಆಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ಇಲ್ಲಿನ ಸರ್ಜಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆರೋಗ ತಜ್ಞ ಡಾ.ಮಂಜುನಾಥ್, ವೈದ್ಯಕೀಯ ಅಧೀಕ್ಷಕ ಹಾಗೂ ಅರಿವಳಿಕೆ ತಜ್ಞ ಡಾ.ವಾದಿರಾಜ ಕುಲಕರ್ಣಿ ಮತ್ತು ಡಾ.ಮೂರ್ಕಣಪ್ಪ, ಡಾ.ಸಂತೋಷ್, ಡಾ.ಅರ್ಜುನ್ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಜಿಲ್ಲೆಯ ಸಾ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಕಾರ್ಮಿಕರೊಬ್ಬರ ಕೈ ಆಕಸ್ಮಿಕವಾಗಿ ಮರ ಕೊಯ್ಯುವ ಯಂತ್ರಕ್ಕೆ ಸಿಲುಕಿ ಎರಡು ತುಂಡಾಗಿತ್ತು. ಸಂಪೂರ್ಣ ಕತ್ತರಿಸಿದ ಮುಂಗೈಯನ್ನು ಐಸ್ ಬಾಕ್ಸ್​ನಲ್ಲಿ ಇಟ್ಟುಕೊಂಡು ರೋಗಿಯು ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಸತತವಾಗಿ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಮುಂಗೈನ ಮಾಂಸಖಂಡ, ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಮರು ಜೋಡಿಸುವ ಮೂಲಕ ರೋಗಿಗೆ ಹೊಸ ಬದುಕು ಕೊಟ್ಟಿದ್ದಾರೆ.

ರೋಗಿಗೆ ಉತ್ತಮ ಆರೈಕೆ ಮಾಡಿ ಒಂದು ವಾರದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ. ಆನಂತರ ಕಾಲ ಕಾಲಕ್ಕೆ ತಪಾಸಣೆ ನಡೆಸಲಾಗಿದೆ. ಇದೀಗ ಕೈ ಚಲನವಲನ ಚೆನ್ನಾಗಿದ್ದು, ರೋಗಿಯು ಚೇತರಿಸಿಕೊಂಡಿದ್ದಾರೆ.

ತುಂಡಾದ ಕೈ ಮರು ಜೋಡಣೆ ಹೇಗೆ ಸಾಧ್ಯ: 'ಅಪಘಾತ ಅಥವಾ ದುರಂತದಲ್ಲಿ ಕೈ-ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾದಾಗ ಅಯ್ಯೋ ಜೀವನ ಮುಗಿದೇ ಹೋಯಿತು ಎಂದು ಚಿಂತಾಕ್ರಾಂತರಾಗುವುದಕ್ಕಿಂತ ಆ ಕ್ಷಣ ಸ್ವಲ್ಪ ಯೋಚಿಸಿ ಮುಂಜಾಗ್ರತಾ ಕ್ರಮ ಕೈಗೊಂಡರೆ ಮತ್ತೆ ಹೊಸ ಬದುಕನ್ನು ಕಂಡುಕೊಳ್ಳಬಹುದು. ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್​ನೊಂದಿಗೆ ಐಸ್ ಬಾಕ್ಸ್​ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ.

ಆದರೆ ಇದು ಬಹಳಷ್ಟು ಜನರಿಗೆ ಸಾಧ್ಯವಾಗುವುದಿಲ್ಲ. ಘಟನೆ ನಡೆದಾಗ ಭಯ ಭೀತರಾಗಿ ಕಟ್ ಆದ ಭಾಗವನ್ನು ತರದೇ ಮರೆತು ಆಸ್ಪತ್ರೆಗೆ ಬರುವ ಸಾಧ್ಯತೆಗಳೇ ಹೆಚ್ಚು. ಇಲ್ಲವೇ ಬಹಳ ತಡವಾಗಿ ಬಂದರೆ ತುಂಡಾದ ಭಾಗದ ಮಾಂಸ ಖಂಡಗಳು ಕೊಳೆತಂತಾಗುತ್ತವೆ. ಜೀವಕೋಶಗಳು ಸಾಯುತ್ತವೆ. ಹಾಗಾಗಿ ಚಿಕಿತ್ಸೆ ಮಾಡಿದರೂ ಯಶಸ್ವಿ ಆಗುವುದಿಲ್ಲ. ಆದರೆ ಈ ಘಟನೆಯಲ್ಲಿ ರೋಗಿಯು ಎಚ್ಚೆತ್ತುಕೊಂಡು ಸಕಾಲಕ್ಕೆ ತುಂಡಾದ ಕೈಯೊಂದಿಗೆ ಬಂದಿದ್ದರಿಂದ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮರು ಜೋಡಿಸಲು ಸಾಧ್ಯವಾಗಿದೆ. ತುಂಡಾದ ಭಾಗಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ನೀರಿನಲ್ಲಿ ಅಥವಾ ಐಸ್ ಬಾಕ್ಸ್​ನೊಳಗೆ ಇಟ್ಟುಕೊಂಡು ಬರಬಾರದು. ಬದಲಾಗಿ ಪ್ಲಾಸ್ಟಿಕ್ ಕವರ್​ನಲ್ಲಿಟ್ಟು ಐಸ್ ಬಾಕ್ಸ್​ನಲ್ಲಿಟ್ಟು ತರಬೇಕು. ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ. ಅಂಗಾಂಗಳ ಮರು ಜೋಡಣೆ ಮಾಡುವ ಕಾರ್ಯ ಮಾಡಬಹುದಾಗಿದೆ' ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: ಕ್ಲಿಷ್ಟಕರ ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿ; 6 ತಿಂಗಳ ಮಗುವಿನ ಬಾಳಿಗೆ ಬೆಳಕಾದ ಮೈಸೂರು ವೈದ್ಯರು - Eye surgery successful

ETV Bharat Logo

Copyright © 2025 Ushodaya Enterprises Pvt. Ltd., All Rights Reserved.