ಕಾರವಾರ: ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ನಾಪತ್ತೆಯಾದವರ ಪತ್ತೆಗೆ ಪಟ್ಟು ಹಿಡಿದು ನಿರಂತರ ಶ್ರಮವಹಿಸುತ್ತಿರುವ ಶಾಸಕ ಸತೀಶ್ ಸೈಲ್ ಇದೀಗ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣನ್ನು ತೆರವು ಮಾಡಿ ಹುಡುಕಾಟ ನಡೆಸಲು ಕೇರಳದ ತ್ರಿಶೂರದಿಂದ ಅಗ್ರೋ ಡ್ರೆಜ್ ಕ್ರಾಫ್ಟ್ ಯಂತ್ರವನ್ನು ತರಿಸಲು ಮುಂದಾಗಿದ್ದಾರೆ.
ಹೌದು, ಶಿರೂರು ಬಳಿ ಕುಸಿದ ಬೃಹತ್ ಗುಡ್ಡದ ಮಣ್ಣು ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿದ್ದರಿಂದ ಇವರೆಗಿನ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ. ಮಾತ್ರವಲ್ಲದೆ ನಾಪತ್ತೆಯಾದ ಮೂವರಿಗಾಗಿ ನದಿ ದಡ ಹಾಗೂ ಹೆದ್ದಾರಿಯ ಮಣ್ಣಿನಡಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣಿನಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕಾರಣದಿಂದ ಅಲ್ಲಿಯೂ ಹುಡುಕಾಟಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಸತೀಶ್ ಸೈಲ್ ಪ್ರಯತ್ನ ಮುಂದುವರಿಸಿದ್ದಾರೆ.
ಈ ಸಂಬಧ ಶಾಸಕ ಸತೀಶ್ ಸೈಲ್ ಅವರೊಂದಿಗೆ ಕೆರಳದ ತ್ರಿಶೂರ್ ಕೃಷಿ ಇಲಾಖೆ ಉಪನಿರ್ದೇಶಕ ವಿಬಿನ್.ಸಿ ನೇತೃತ್ವದ ಮೂವರ ತಜ್ಞರ ತಂಡ ಗಂಗಾವಳಿ ನದಿ ಬಳಿ ಮಂಗಳವಾರ ಪರಿಶೀಲನೆ ನಡೆಸಿದೆ. ಈ ವೇಳೆ ಶಾಸಕ ಸತೀಶ್ ಸೈಲ್ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಹಾಗೂ ಇತರೆ ವಸ್ತುಗಳು ಇರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣು ಹಾಗೂ ಮರಗಳನ್ನು ಯಂತ್ರದಿಂದ ತೆರವು ಮಾಡಿದಲ್ಲಿ ಕಾರ್ಯಾಚರಣೆಗೆ ಸಹಕಾರಿಯಾಗುವ ಬಗ್ಗೆ ತಿಳಿಸಿದರು. ಇದೇ ವೇಳೆ ಆಗಮಿಸಿದ ಡ್ರೆಜ್ಜಿಂಗ್ ಯಂತ್ರದ ಆಫರೇಟರ್‌ಗಳು ಯಂತ್ರ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತ್ರಿಶೂರ್‌ನ ಕೃಷಿ ಇಲಾಖೆಯ ಉಪನಿರ್ದೇಶಕ ವಿಬಿನ್.ಸಿ, ಗಂಗಾವಳಿ ನದಿಯಲ್ಲಿ ಅಗ್ರೋ ಡ್ರೆಜ್ ಕ್ರಾಫ್ಟ್ ಯಂತ್ರ ಬಳಕೆಯ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿ ನದಿ ಹರಿವು, ಆಳದ ಮಾಹಿತಿ ಪಡೆದುಕೊಂಡಿದ್ದೇವೆ. ಗಂಗಾವಳಿ ನದಿಯಲ್ಲಿ ಯಂತ್ರದ ಕಾರ್ಯಾಚರಣೆ ಕುರಿತು ಸಾಧ್ಯತೆ ಪರಿಶೀಲನೆ ಮಾಡಲಾಗಿದೆ. ನಮ್ಮಲ್ಲಿರುವ ಡ್ರೆಜ್ಜಿಂಗ್ ಯಂತ್ರ 6 ಮೀಟರ್ ಆಳದವರೆಗಿನ ನೀರಿನಲ್ಲಿ ನಿಲ್ಲುವ ಸಾಮರ್ಥ್ಯವಿರುವ ಬಗ್ಗೆ ಯಂತ್ರದ ಆಫರೇಟರ್‌ಗಳು ಮಾಹಿತಿ ನೀಡಿದ್ದಾರೆ. ನಾವು ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತೇವೆ ಎಂದರು.
ಇನ್ನು, ಶಾಸಕ ಸತೀಶ್ ಮಾತನಾಡಿ, ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ. ತ್ರಿಶೂರ್ ಡ್ರೆಜ್ಜಿಂಗ್ ಯಂತ್ರ ಲಭ್ಯವಾದಲ್ಲಿ ನಮಗೆ ಕಾರ್ಯಾಚರಣೆಗೆ ನೆರವಾಗಲಿದೆ. ನದಿಯಲ್ಲಿ 15 ಅಡಿ ಆಳದವರೆಗಿನ ಮಣ್ಣು ತೆರವು ಈ ಯಂತ್ರದಿಂದ ಸಾಧ್ಯವಾಗಲಿದೆ. ಅಲ್ಲದೆ ನದಿಯಲ್ಲಿರುವ ಮರವನ್ನು ಸಹ ತೆರವುಗೊಳಿಸಲು ಸಾಧ್ಯವಾಗುವ ನಂಬಿಕೆ ಇದೆ. ಇದೇ ಕಾರಣಕ್ಕೆ 60 ಅಡಿಯ ಲಾಂಗ್ ಆರ್ಮ್ ಬೂಮ್ ಹಿಟಾಚಿ ಇಲ್ಲಿಯೇ ಇಟ್ಟುಕೊಂಡಿದ್ದೇವೆ. ಮುಳುಗುತಜ್ಞ ಈಶ್ವರ್ ಮಲ್ಪೆ ತಂಡದಿಂದಲೂ ಕಾರ್ಯಾಚರಣೆಗೆ ನೆರವು ಕೋರಿದ್ದೇವೆ ಎಂದು ಮಾಹಿತಿ ನೀಡಿದರು.
ಅಮವಾಸ್ಯೆ ದಿನ ಕಾರ್ಯಾಚರಣೆ: ಶಿರೂರು ಗುಡ್ಡ ಕುಸಿತದಿಂದ ಇನ್ನೂ ಮೂವರು ನಾಪತ್ತೆಯಾಗಿದ್ದು, ಅವರ ಕುಟುಂಬಸ್ಥರು ನಿತ್ಯವೂ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳೀಯ ಶಾಸಕರು ಆರಂಭದಿಂದಲೂ ನಿತ್ಯವೂ ಇಲ್ಲಿಯೇ ನಿಂತು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಾನು ನಾಪತ್ತೆಯಾದವರ ಮನೆಗೆ ತೆರಳಿದಾಗ ಅವರ ಕುಟುಂಬದವರು ತಮ್ಮವರನ್ನು ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ. ಇದು ನಮಗೂ ದುಃಖ ತರಿಸುತ್ತಿದೆ. ನಾನು ಅವರಿಗೆ ಧೈರ್ಯ ಹೇಳಿದ್ದೇನೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಫೆ ಹೇಳಿದರು.
ಶಾಸಕರು ಇದೀಗ ಕೇರಳದಿಂದ ಡ್ರೆಜ್ಜಿಂಗ್ ಯಂತ್ರ ತರಿಸುವ ಭರವಸೆ ನೀಡಿದ್ದಾರೆ. ಅದು ಬಂದಲ್ಲಿ ನಾವು ಅಮವಾಸ್ಯೆ ದಿನ ಕಾರ್ಯಾಚರಣೆ ಕೈಗೊಳ್ಳುತ್ತೇವೆ. ಆ.3, 4 ರಂದು ಅಮವಾಸ್ಯೆ ದಿನ. ನೀರಿನ ಉಬ್ಬರ ಕಡಿಮೆ ಇರುತ್ತದೆ. ನೀರು ಕಡಿಮೆ ಆಗುವಾಗ ಎರಡು ಗಂಟೆ ಸಮಯದಲ್ಲಿ ನಾವು ಡೀಪ್ ಡೈವ್ ಮಾಡಲು ಅನುಕೂಲವಾಗುತ್ತದೆ. ಇದರಿಂದ ಆ ಯಂತ್ರ ಬಂದಲ್ಲಿ ನಮಗೆ ಹುಡುಕಲು ಮತ್ತಷ್ಟು ಅನುಕೂಲವಾಗುತ್ತದೆ. ತಾವು ಕೂಡ ಅಂದೇ ತರಲು ಮತ್ತು ನಮಗೆ ಡೈವಿಂಗ್ ಮಾಡಲು ಅನುಮತಿ ನೀಡಲು ಶಾಸಕ ಸತೀಶ್ ಸೈಲ್ ಬಳಿ ಮನವಿ ಮಾಡಿಕೊಂಡಿರುವುದಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ಮಾಹಿತಿ ನೀಡಿದರು.
ಓದಿ: ಕೇರಳಕ್ಕೆ ಅಗತ್ಯ ನೆರವು ಘೋಷಿಸಿದ ಸಿಎಂ ಸಿದ್ದರಾಮಯ್ಯ; ಸಚಿವ ಸಂತೋಷ್ ಲಾಡ್ ವಯನಾಡ್‌ಗೆ - Wayanad Landlsides