ಕಾರವಾರ(ಉತ್ತರ ಕನ್ನಡ): ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ಕೇರಳ ಮೂಲದ ಭಾರತ್ ಬೆಂಜ್ ಲಾರಿಯ ಜೊತೆಗೆ ಚಾಲಕ ಅರ್ಜುನ್ ಮೃತದೇಹ ಕೂಡ ಪತ್ತೆಯಾಗಿದೆ. ಜುಲೈ 16 ರಂದು ಗುಡ್ಡ ಕುಸಿದ ಪರಿಣಾಮ ಲಾರಿ ಸಹಿತ ಚಾಲಕ ಅರ್ಜುನ್ ನಾಪತ್ತೆಯಾಗಿದ್ದ. ಸುಮಾರು 72 ದಿನಗಳ ಬಳಿಕ ಲಾರಿಯೊಂದಿಗೆ ಆತನ ಮೃತದೇಹ ಪತ್ತೆಯಾಗಿದೆ.
ಗಂಗಾವಳಿ ನದಿಯಲ್ಲಿ ಇಂದು ನಡೆದ ಆರನೇ ದಿನದ ಕಾರ್ಯಾಚರಣೆ ವೇಳೆ ಹಲವು ಅವಶೇಷಗಳು ಪತ್ತೆಯಾಗಿದ್ದವು. ಮುಂಜಾನೆ ಡ್ರೆಜ್ಜಿಂಗ್ ಮಶಿನ್ಗೆ ಬೃಹತ್ ವಸ್ತು ಸಿಗುತ್ತಿರುವುದು ಪತ್ತೆಯಾಗಿತ್ತು. ಅಲ್ಲದೆ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಲಾರಿಯ ಬಿಡಿಭಾಗ ಕೂಡ ದೊರೆತಿತ್ತು. ಇದರಿಂದ ಗಂಗಾವಳಿ ನದಿಯಲ್ಲಿ ಡ್ರೆಜ್ಜಿಂಗ್ ಮಶಿನ್ ನಿರಂತರವಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು ಇದೀಗ ಭಾರತ್ ಬೆಂಜ್ ಲಾರಿ ಕೂಡ ಸಿಕ್ಕಿದೆ.
ಸದ್ಯ ಲಾರಿಯನ್ನು ಬಾರ್ಜ್ನಲ್ಲಿರುವ ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದು ಲಾರಿ ಮುಂಭಾಗ ಹಾಗೂ ಚಾಲಕನ ಮೃತದೇಹ ಗೋಚರವಾಗಿದೆ.
ಜುಲೈ 16 ರಂದು ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದ್ದ ಭೀಕರ ಗುಡ್ಡ ಕುಸಿತ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಅವರ ಪೈಕಿ ಎಂಟು ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಅರ್ಜುನ್ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಗಳು ಪತ್ತೆಯಾಗಬೇಕಿದೆ.