ಕಾರವಾರ: ಭಾರೀ ಮಳೆಯಿಂದಾಗಿ ಅಂಕೋಲಾದ ಶಿರೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದಿರುವ ಬೃಹತ್ ಗುಡ್ಡ ತೆರವು ಕಾರ್ಯಾಚರಣೆ ಬುಧವಾರ ರಾತ್ರಿವರೆಗೂ ನಡೆಯಿತು. ಆದರೆ ಈವರೆಗೆ 4 ಮಂದಿಯ ಮೃತದೇಹ ಮಾತ್ರ ಸಿಕ್ಕಿದ್ದು, ಉಳಿದ 6 ಮಂದಿಗೆ ಗಂಗಾವಳಿ ನದಿ ಹಾಗೂ ಮಣ್ಣು ಕುಸಿದಿರುವ ಪ್ರದೇಶದಲ್ಲಿ ನಿರಂತರ ಹುಡುಕಾಟ ನಡೆಯುತ್ತಿದೆ.
ಶಿರೂರು ಬಳಿ ಹೆದ್ದಾರಿ ಮೇಲೆ ಬಿದ್ದ ಬೃಹತ್ ಪ್ರಮಾಣದ ಮಣ್ಣನ್ನು 8ಕ್ಕೂ ಹೆಚ್ಚು ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳನ್ನು ಬಳಸಿಕೊಂಡು ಹೆದ್ದಾರಿಯ ಎರಡೂ ಬದಿಯಿಂದ ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ. ಆದರೆ ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಅಕ್ಕಪಕ್ಕದ ಗುಡ್ಡಗಳು ಕೂಡಾ ಕುಸಿಯುವ ಭೀತಿ ಎದುರಾಗಿದೆ. ಈ ಬೆಳವಣಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರ ಆತಂಕಕ್ಕೂ ಕಾರಣವಾಗಿದೆ.
ಶಿರೂರು ಗುಡ್ಡ ಕುಸಿತದಲ್ಲಿ ಟಿಂಬರ್ ತುಂಬಿದ ಲಾರಿ ಚಾಲಕ ಕಣ್ಮರೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಲಾರಿ ಸಮೇತ ಚಾಲಕ ಅರ್ಜುನ್ (30) ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಜೋಯಿಡಾ ರಾಮನಗರದ ಜಗಳಪೆಟ್‌ದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ಪ್ರಯಾಣಿಸುತ್ತಿತ್ತು. ಕೊನೆಯದಾಗಿ ಲಾರಿ ಜಿಪಿಎಸ್ ಲೋಕೇಷನ್ ಗುಡ್ಡ ಕುಸಿತ ಪ್ರದೇಶದಲ್ಲಿ ಪತ್ತೆಯಾಗಿದೆ. ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಗುಡ್ಡ ಕುಸಿತದ ಸ್ಥಳದಲ್ಲಿಯೇ ತಂಗಿದ್ದ ಬಗ್ಗೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಮಾಹಿತಿ ನೀಡಿದ್ದು, ತ್ವರಿತ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸಹೋದರ ಅಭಿಜಿತ್ ಮನವಿ ಮಾಡಿದ್ದಾರೆ.
ನದಿಯಲ್ಲಿ ನಾಪತ್ತೆಯಾದವರಿಗಾಗಿ ಎನ್‌ಡಿಆರ್‌ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳು ಬೋಟ್‌ಗಳ ಮೂಲಕ ನಿರಂತರವಾಗಿ ಹುಡುಕಾಟ ಮುಂದುವರಿಸಿವೆ. ಮಣ್ಣು ಕುಸಿದ ಪ್ರದೇಶದಲ್ಲಿದ್ದ ಎರಡು ವಾಹನಗಳನ್ನು ತೆರವು ಮಾಡಲಾಗಿದೆ. ಉಳಿದಂತೆ, ಒಂದು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ತೇಲಿಕೊಂಡು ಹೋಗಿದ್ದು, ಸ್ಥಳಕ್ಕೆ ಬಿಪಿಸಿಎಲ್ ಸೌತ್ ಎಂಡ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಹೆದ್ದಾರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಮಣ್ಣು ಇರುವ ಕಾರಣ ನಿನ್ನೆ ಸಂಜೆಯವರೆಗೂ ತೆರವುಗೊಂಡಿಲ್ಲ. ಗುರುವಾರ ತೆರವು ಕಾರ್ಯಾಚರಣೆ ಮುಗಿಯುವ ಸಾಧ್ಯತೆ ಇದೆ. ಆದರೆ ಪಕ್ಕದಲ್ಲೂ ಬೃಹತ್ ಗುಡ್ಡ ಬೀಳುವ ಸಾಧ್ಯತೆ ಇದ್ದು, ಅದರ ತೆರವಿನ ಬಳಿಕವೇ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿದು ಗಂಗಾವಳಿ ನದಿ ದಡದ 7 ಮನೆಗಳು ನೆಲಸಮ: ತವರಿಗೆ ಶವವಾಗಿ ಮರಳಿದ ಮಗಳು! - Shirur Hill Collapse