ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟ ತನ್ನ ನಷ್ಟವನ್ನು ಮುಂದಿಟ್ಟುಕೊಂಡು ಹಾಲು ಖರೀದಿಯಲ್ಲಿ ಪ್ರತಿ ಕೆ.ಜಿಗೆ 90 ಪೈಸೆ ದರ ಕಡಿತ ಮಾಡಿದೆ. ಇದರಿಂದ ಹಾಲು ಉತ್ಪಾದಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಹಾಲು ಉತ್ಪಾದಕರು ಆಕ್ರೋಶ ಹೊರಹಾಕಿದ್ದಾರೆ.
ಶಿಮೂಲ್ನಲ್ಲಿ ಚುನಾವಣೆ ನಡೆಸುವ ಸಂಬಂಧ ಕಳೆದ ಮೂರು ತಿಂಗಳಿಂದ ಆಡಳಿತ ಮಂಡಳಿ ಇರಲಿಲ್ಲ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿ ದರ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಲಿ ಶಿಮೂಲ್ನಲ್ಲಿ ರೂ. 6.75 ಕೋಟಿ ನಷ್ಟ ಉಂಟಾಗಿದೆ. ಇದನ್ನೇ ನೆಪ ಮಾಡಿಕೊಂಡು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಕಡಿಮೆ ಮಾಡಿದೆ. ಇದರಿಂದ ಹಾಲು ಉತ್ಪಾದಕರು ನಷ್ಟವನ್ನು ಅನುಭವಿಸುವಂತೆ ಆಗಿದೆ. ಇದರಿಂದ ಹಾಲು ಉತ್ಪಾದಕರು ಹೈನುಗಾರಿಕೆಯಿಂದಲೇ ಹಿಂದೆ ಸರಿಯುವ ಪರಿಸ್ಥಿತಿ ಬಂದಿದೆ.
ಮೇಲಿನ ಹನಸವಾಡಿ ಗ್ರಾಮದ ಹಾಲು ಉತ್ಪಾದಕ ಮಹೇಶ್ ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾತನಾಡಿ, "ಇಂದು ಹಾಲು ಉತ್ಪಾದನೆ ಉದ್ಯಮ ಕಷ್ಟದಲ್ಲಿದೆ. ಅದರಲ್ಲೂ ಈಗ ದರ ಕಡಿಮೆ ಮಾಡಿರುವುದು ಖಂಡನೀಯವಾಗಿದೆ. ಶಿಮೂಲ್ ಹಾಲಿ ದರ ಪ್ರತಿ ಕೆ.ಜಿ ಮೇಲೆ 90 ಪೈಸೆ ಕಡಿಮೆ ಮಾಡಿರುವುದು ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಒಂದು ಕಡೆ ಶಿಮೂಲ್ ಜಾನುವಾರುಗಳಿಗೆ ನೀಡುವ ಮೇವು, ಮೇವಿನ ಬೀಜ ದರವನ್ನು ಏರಿಕೆ ಮಾಡಿದೆ. ಅಲ್ಲದೆ ರೈತರಿಂದ ಖರೀದಿಸುವ ಹಾಲಿನ ಸ್ಟಾಂಡರ್ಡ್ನಲ್ಲಿಯೂ ಸಹ ಮೋಸ ಮಾಡಲಾಗುತ್ತಿದೆ. ಕೆಲವೊಮ್ಮೆ ಹಾಲು ಉತ್ಪಾದಕ ಸಂಘದಲ್ಲಿ ಸ್ಟಾಂಡರ್ಡ್ ಇರದ ಹಾಲನ್ನು ತೆಗೆದುಕೊಳ್ಳಲಾಗುತ್ತದೆ. ಅದು ಶಿಮೂಲ್‌ಗೆ ಹೋದಾಗ ಕೆಲವೊಮ್ಮೆ ಸ್ಟಾಂಡರ್ಡ್ ಬರುತ್ತದೆ. ತೆಗೆದುಕೊಂಡು ಹೋಗಿ ಅಲ್ಲಿ ನಿಗದಿತ ಸ್ಟಾಂಡರ್ಡ್ ಬಂದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಈ ಹಾಲನ್ನು ಉತ್ಪಾದಕನಿಗೆ ವಾಪಸ್ ನೀಡುವುದಿಲ್ಲ" ಎಂದು ಅಳಲು ಹೊರಹಾಕಿದ್ದಾರೆ.
ಈ ಬಗ್ಗೆ ಶಿಮೂಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿ, "ನಮ್ಮ ಒಕ್ಕೂಟದಲ್ಲಿ 6 ಕೋಟಿ 75 ಲಕ್ಷ ನಷ್ಟ ಇತ್ತು. ಕರ್ನಾಟಕದ 14 ಒಕ್ಕೂಟಗಳು ನಷ್ಟದಲ್ಲಿವೆ. ಹಾಲಿನ ಪೌಡರ್ 1 ಕೆಜಿ ತಯಾರಿಸಲು ರೂ. 340 ವೆಚ್ಚ ತಗಲುತ್ತಿದೆ. ಇದೇ ಹಾಲಿನ ಪುಡಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ.210ಗೆ ಮಾರಾಟ ಆಗುತ್ತಿದೆ. ಅದೇ ರೀತಿ ತುಪ್ಪದಲ್ಲಿ 58 ರೂ. ನಷ್ಟವಾಗುತ್ತಿದೆ. ಇದೆಲ್ಲಾ ಸೇರಿ ಆಡಳಿತ ಮಂಡಳಿ ಇಲ್ಲದೆ ಹೋದಾಗ ರೂ. 6.75 ಕೋಟಿ ನಷ್ಟವಾಗಿದೆ. ಹೊಸದಾಗಿ ಬಂದ ಶಿಮೂಲ್ ಆಡಳಿತ ಮಂಡಳಿ ಪರಿಶೀಲಿಸಿದಾಗ ನಷ್ಟ ತಿಳಿದುಬಂದಿದೆ. ಇದರಿದ ಖರೀದಿ ಮಾಡುವ ಹಾಲಿನ ದರದಲ್ಲಿ 90 ಪೈಸೆ ಕಡಿಮೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಲಾಗುವುದು. ನಮ್ಮ ತುಪ್ಪಕ್ಕೆ ದೇಶದಲ್ಲಿಯೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಬೇಡಿಕೆ ಬಂದಿದೆ. ಅದೇ ರೀತಿ ಹಾಲಿನ ಪೌಡರ್ಗೂ ಒಳ್ಳೆಯ ದರ ಬರಬಹುದು. ಆಗ ರೈತರಿಗೆ ಹಾಲಿನ ದರ ಏರಿಕೆ ಮಾಡಲಾಗುವುದು" ಎಂದರು.
ಇದನ್ನೂ ಓದಿ: ಭಾರತದ ಅಭಿವೃದ್ಧಿ ಅಬಾಧಿತ, ಶೇ 7.2ರ ದರದಲ್ಲಿ ಜಿಡಿಪಿ ಬೆಳವಣಿಗೆ: ಆರ್ಬಿಐ