ಶಿವಮೊಗ್ಗ: ಅಂಬು ಛೇದನದೊಂದಿ ಶಿವಮೊಗ್ಗ ದಸರಾ ಸಂಪನ್ನಗೊಂಡಿತು. ತಹಶೀಲ್ದಾರ್ ಗಿರೀಶ್ ಅವರು ಅಲ್ಲಮಪ್ರಭು ಮೈದಾನದಲ್ಲಿ ಅಂಬು ಛೇದನ ಮಾಡಿದರು. ಬಳಿಕ ಜನರು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ಇದೇ ವೇಳೆ ಬೃಹತ್ ರಾವಣನ ಪ್ರತಿಕೃತಿ ದಹಿಸಲಾಯಿತು.
ಮಳೆ ನಡೆವೆಯೂ ನಾಡ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿ ಇರುವ 650 ಕೆ.ಜಿ ಅಂಬಾರಿ ಹೊತ್ತ ಸಾಗರ ಆನೆ ಹಾಗೂ ಅದಕ್ಕೆ ಸಾಥ್ ಕೊಟ್ಟ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ಎಸ್.ಪಿ.ಎಂ. ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ, ನೆಹರು ರಸ್ತೆ, ಟಿ.ಶೀನಪ್ಪ ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ರಸ್ತೆಯ ಮೂಲಕ ಅಲ್ಲಮ ಪ್ರಭು ಮೈದಾನವನ್ನು ಯಶಸ್ವಿಯಾಗಿ ತಲುಪಿದವು.
ಡೊಳ್ಳು ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಕೀಲು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಮೆರಮಣಿಗೆಯಲ್ಲಿ ಶಾಸಕ ಚನ್ನಬಸಪ್ಪ, ಆಯುಕ್ತರಾದ ಕವಿತಾ ಯೋಗಪ್ಪನವರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಇದ್ದರು.
ಇದಕ್ಕೂ ಮೊದಲು ಇಂದು ಮಧ್ಯಾಹ್ನ ನಗರದ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಧ್ವಜಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪನವರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಚಾಮುಂಡೇಶ್ವರಿ ಮೂರ್ತಿ ಇರುವ ಅಂಬಾರಿಯನ್ನು ಸಾಗರ ಆನೆಗೆ ಕಟ್ಟಲಾಯಿತು. ಅಂಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಂಪತಿ ಮತ್ತು ಶಾಸಕ ಚನ್ನಬಸಪ್ಪ ಸೇರಿದಂತೆ ಪ್ರಮುಖರು ಪುಷ್ಪಾರ್ಚನೆ ಮಾಡಿದರು.
ಇದನ್ನೂ ಓದಿ: ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು