ಬೆಂಗಳೂರು/ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ ರಾತ್ರೋರಾತ್ರಿ ಬೆಂಗಳೂರುಗೆ ಪಯಣಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪಕ್ಕಾ ಬೆಂಬಲಿಗರಾಗಿರುವ ಅಜ್ಜಂಫೀರ್ ಖಾದ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಜ್ಜಂಪೀರ್ ಖಾದ್ರಿ ಮನವೊಲಿಸಿದ್ದಾರೆ. ಅಜ್ಜಂಫೀರ್ ಖಾದ್ರಿ ಮನವೊಲೈಕೆ ಯಶಸ್ವಿಯಾಗಿದ್ದು, ಅಖಾಡದಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾದಂತಾಗಿದೆ. ಇದರಿಂದ ಭರತ್ ಬೊಮ್ಮಾಯಿಗೆ ಗೆಲುವು ಮತ್ತಷ್ಟು ಕಷ್ಟಕರವಾಗಲಿದೆ ಎನ್ನಲಾಗುತ್ತಿದೆ. ಅಜ್ಜಂಫೀರ್ ಖಾದ್ರಿಗೆ ಎಂಎಲ್ಸಿ ಸ್ಥಾನ ಸೇರಿದಂತೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಮನವೊಲಿಕೆ: ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂ ಪೀರ್ ಖಾದ್ರಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಬಂದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ನಾಮಪತ್ರ ವಾಪಸು ಪಡೆಯುವಂತೆ ಮನವೊಲಿಕೆ ಮಾಡಿದರು. ಟಿಕೆಟ್ ನೀಡದೇ ಇರುವುದಕ್ಕೆ ಅಸಮಾಧಾನ ಹೊರಹಾಕಿದ ಖಾದ್ರಿ, ಸಿಎಂ ಮನವೊಲಿಕೆಗೆ ಒಪ್ಪಿ ನಾಮಪತ್ರ ಹಿಂಪಡೆಯುವ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ಗೆ ಟಿಕೆಟ್ ನೀಡಲಾಗಿತ್ತು. ನಿನ್ನೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಇತ್ತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ ಕೂಡ ನಾಮಪತ್ರ ಸಲ್ಲಿಸಿದ್ದರು. ಕೊನೆಯ 13 ನಿಮಿಷ ಬಾಕಿ ಇರುವಾಗ ಬೈಕ್‌ನಲ್ಲಿ ತೆರಳಿ ಚುನಾವಣಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಿದ್ದರು. ಆ ಮೂಲಕ ಶಿಗ್ಗಾವಿ ಕಾಂಗ್ರೆಸ್ನಲ್ಲಿ ಬಂಡಾಯದ ಬಾವುಟ ಹಾರಿಸಿದ್ದರು.
ಅದಕ್ಕೂ ಮುನ್ನ ಶಿಗ್ಗಾವಿ ಟಿಕೆಟ್ ವಂಚಿತ ಅಜ್ಜಂ ಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದಂತೆ ಸಚಿವ ಜಮೀರ್ ಅಹಮದ್ ಖಾನ್ ಮನವೊಲಿಕೆಗೆ ಯತ್ನಿಸಿದ್ದರು. ಸಚಿವ ರಹೀಮ್ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಹಾಗೂ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಅವರೊಂದಿಗೆ ಶಿಗ್ಗಾವಿಗೆ ಧಾವಿಸಿ ಖಾದ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸಲು ಯತ್ನಿಸಿದ್ದರು. ಅಸಮಾಧಾನಗೊಂಡಿದ್ದ ಬೆಂಬಲಿಗರನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು. ಆದರೆ ಅದಕ್ಕೆ ಕಿವಿಗೊಡದ ಖಾದ್ರಿ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ