ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಲಾರಂಭಿಸಿದೆ. ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಅಂತಿಮ ಹಂತದ ಕಸರತ್ತು ನಡೆಸುತ್ತಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿ ಆಯ್ಕೆ ಮಾಡಿದ್ದರೂ ಬಂಡಾಯದ ಬಿಸಿ ತಟ್ಟಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರಿಗೆ ಅಥವಾ ಲಿಂಗಾಯತರಿಗೆ ಮಣೆ ಹಾಕಬೇಕಾ ಅನ್ನೋ ಗೊಂದಲದಲ್ಲಿ ಕಾಂಗ್ರೆಸ್ ಇದೆ. ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಗಳು ಈಗಾಗಲೇ ಬೆಂಗಳೂರಿನಲ್ಲಿ ಬಿಡುಬಿಟ್ಟಿದ್ದಾರೆ.
ಭರತ್ ಬೊಮ್ಮಾಯಿ ಪ್ರಚಾರ: ಟಿಕೆಟ್ ಸಿಕ್ಕ ಬೆನ್ನಲ್ಲೇ ಭರತ್ ಬೊಮ್ಮಾಯಿ ಈಗಾಗಲೇ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಇದೇ 25 ರಂದು ಭರತ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕೇಂದ್ರ ಸಚಿವರು ಹಾಗೂ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಳಿಕ ಕೂಡ ಕ್ಷೇತ್ರದಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ಬಂಡಾಯ: ಈ ಮಧ್ಯೆ ಸ್ಥಳೀಯ ನಾಯಕ ಬಿಜೆಪಿ ಟಿಕೆಟ್ ವಂಚಿತ ಶ್ರೀಕಾಂತ ದುಂಡಿಗೌಡ್ರ ಬಂಡಾಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್ ಸಿಗದ ಕಾರಣ ಶ್ರೀಕಾಂತ್ ದುಂಡಿಗೌಡರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಗುರುವಾರ ಸಂಜೆ ಅವರ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಅಥವಾ ಬಿಜೆಪಿಯಲ್ಲಿ ಉಳಿಯಬೇಕಾ ಎಂಬುದನ್ನು ಇಂದು ತೀರ್ಮಾನಿಸಲಿದ್ದಾರೆ.
ಯಾವ ಬಂಡಾಯ ಇಲ್ಲ. ಪ್ರತಿ ಚುನಾವಣೆಯಲ್ಲೂ ಈ ರೀತಿ ಆಗುವುದು ಸಾಮಾನ್ಯ. ನಾವು ಎಲ್ಲವನ್ನೂ ಸರಿಮಾಡುತ್ತೇವೆ. ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿಯಾದರೂ ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿನಯ್ ಕುಲಕರ್ಣಿ ಪುತ್ರಿಗೆ ಟಿಕೆಟ್?: ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ದಿನಾಂಕ ನಿಗದಿಯಾಗಿದ್ದರು ಸಹ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ ಮಾಜಿ ಸಚಿವ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಹೆಸರು ಸಹ ಕೇಳಿಬರುತ್ತಿದೆ. ಆದರೆ, ಸ್ಥಳೀಯ ನಾಯಕರು ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.
ಇತ್ತ ಕಾಂಗ್ರೆಸ್ಗೆ ಅಭ್ಯರ್ಥಿ ಆಯ್ಕೆ ಸವಾಲಾಗಿದೆ. ಇನ್ನು ಬಂಡಾಯ ಶಮನಕ್ಕೆ ಬಸವರಾಜ ಬೊಮ್ಮಾಯಿ ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕೈ ಹಿಡಿದ ಯೋಗೇಶ್ವರ್ಗೆ ಚನ್ನಪಟ್ಟಣ ಟಿಕೆಟ್, ಶಿಗ್ಗಾಂವಿ ಸಸ್ಪೆನ್ಸ್