ಹಾವೇರಿ: ನಿರೀಕ್ಷಿಸಿದಂತೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಸಚಿವರಾದ ಜಮೀರ್ ಅಹ್ಮದ್, ಶಿವಾನಂದ ಪಾಟೀಲ್ ಜೊತೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಅಜ್ಜಂಪೀರ್ ಖಾದ್ರಿ, ಇಂದು ತಮ್ಮ ನಾಮಪತ್ರ ವಾಪಸ್ ಪಡೆದರು.
ನಾಮಪತ್ರ ವಾಪಸ್ ಬಳಿಕ ತಹಶೀಲ್ದಾರ್ ಕಚೇರಿ ಒಳಗೆ ಕುಳಿತ ಕಾಂಗ್ರೆಸ್ ನಾಯಕರು, ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಕರೆಸಿಕೊಂಡರು. ಆ ಬಳಿಕ ಯಾಸೀರ್ ಖಾನ್ ಪಠಾಣ್ ಜೊತೆಗೊಡಿ ಎಲ್ಲರೂ ಹೊರಗೆ ಬಂದರು.
ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಜ್ಜಂಪೀರ್ ಖಾದ್ರಿ, ಯಾಸೀರ್ ಖಾನ್ ಮುಖದಲ್ಲಿ ಸಿಎಂ ಸಿದ್ದರಾಮಯ್ಯನವರು ಕಾಣುತ್ತಿದ್ದಾರೆ. ನಾನು ಯಾವುದೇ ಷರತ್ತುಗಳಿಲ್ಲದೇ ನಾಮಪತ್ರ ವಾಪಸ್ ಪಡೆದಿರುವೆ. ನಾನು ಯಾಸೀರ್ ಖಾನ್ ಗುರುವಾಗಿ ಮಾರ್ಗದರ್ಶನ ಮಾಡುವೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
ಸಚಿವರಾದ ಜಮೀರ್ ಅಹ್ಮದ್ ಹಾಗೂ ಶಿವಾನಂದ ಪಾಟೀಲ್ ಮಾತನಾಡಿ, ಬಂಡಾಯ ಮುಗಿದ ಅಧ್ಯಾಯ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಯಾಸೀರ್ ಖಾನ್, ಅಜ್ಜಂಪೀರ್ ಖಾದ್ರಿ ಜೊತೆ ಬಂಡಾಯ ಶಮನವಾಗಿದೆ. ಅವರು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿರುವುದು ನನಗೆ ಆನೆಬಲ ತಂದಿದೆ. ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಮೀರ್ ಅವರನ್ನು ಕಳುಹಿಸಿ ಅಜ್ಜಂಪೀರ್ ಖಾದ್ರಿ ಅವರ ನಾಮಪತ್ರ ವಾಪಸ್ ಪಡೆಯುವಂತೆ ಮನವೊಲಿಸುವ ಟಾಸ್ಕ್ ನೀಡಿದ್ದು, ಅದು ಯಶಸ್ವಿಯಾಗಿದೆ. ನಾಮಪತ್ರ ವಾಪಸಾತಿಗೆ ಇಂದು ಕೊನೆಯ ದಿನವಾಗಿತ್ತು. ಮಧ್ಯಾಹ್ನ 3 ಗಂಟೆ ಒಳಗೆ ವಾಪಸ್ ಪಡೆಯಲು ಅವಕಾಶವಿತ್ತು. ಅದಕ್ಕೂ ಮುನ್ನವೇ ಖಾದ್ರಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿ ಉಪ ಚುನಾವಣೆ: ಸಚಿವ ಜಮೀರ್ ಮಾತಿಗೆ ಮಣಿದು ನಾಮಪತ್ರ ವಾಪಸ್ ಪಡೆಯುತ್ತಾರಾ ಖಾದ್ರಿ?