ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮತ್ತೆ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ, ಹೆಸರಾಂತ ಉದ್ಯಮಿ, ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಸಾರಥ್ಯ ದೊರೆತಿದೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪರವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಿಗದಿತ ಅವಧಿಯಲ್ಲಿ ನಾಮಪತ್ರ ಸಲ್ಲಿಸದೇ ಇರುವ ಕಾರಣ ಶಾಮನೂರು ಶಿವಶಂಕರಪ್ಪನವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎಂ ಬಿ ದ್ಯಾಬೇರಿ ಅವರು ಇಂದು ಘೋಷಣೆ ಮಾಡಿದ್ದಾರೆ.
ಸತತ ಮೂರನೇ ಅವಧಿಗೆ ಶಾಮನೂರು ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 17 ವರ್ಷಗಳಿಂದ ಮಹಾಸಭಾದಲ್ಲಿ ಶಾಮನೂರು ಅವರು ಸೇವೆ ಸಲ್ಲಿಸುತ್ತಿದ್ದು, ಅವರ ಈಗಿನ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರ ಅವಧಿ ಐದು ವರ್ಷಗಳಾಗಿರುತ್ತದೆ.
ಅಖಿಲ ಭಾರತ ವೀರಶೈವ ಮಹಾಸಭಾದ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಸಲಾಗಿದ್ದು, ಮಹಾಸಭಾದ ರಾಜ್ಯ ಅಧ್ಯಕ್ಷರಾಗಿ ನಿವೃತ್ತ ಡಿಜಿಪಿ ಶಂಕರ ಬಿದರಿ ಆಯ್ಕೆಯಾಗಿದ್ದಾರೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಹಿರಿಯ ಮುಖಂಡ ಡಾ. ಶಾಮನೂರು ಶಿವಶಂಕರಪ್ಪ ಪುನರಾಯ್ಕೆಯಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸ್ಥಾನ ಪ್ರತಿಷ್ಠಿತ ಹುದ್ದೆಯಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮತ್ತು ವೀರಶೈವ - ಲಿಂಗಾಯತ ಬೇರೆ ಬೇರೆ ಹಾಗು ಜಾತಿ ಗಣತಿ ಸಂದರ್ಭದಲ್ಲಿ ವೀರಶೈವ ಮಹಾಸಭೆ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ವೀರಶೈವ ಮತ್ತು ಲಿಂಗಾಯತ ಉಪ ಪಂಗಡಗಳನ್ನು ಬೇರ್ಪಡಿಸಲು ಅವಕಾಶ ನೀಡದೇ ಒಂದುಗೂಡಿಸಿಕೊಂಡು ಹೋಗಲು ಶ್ರಮಿಸಿತ್ತು. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಸಮಾಜದ ಮುಖಂಡರುಗಳಿಗೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಲ್ಲಿ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ಪ್ರಯತ್ನಿಸಿದ್ದರು.