ದಾವಣಗೆರೆ: ಇಲ್ಲಿನ ಹೊಸ ಕುಂದವಾಡ ಗ್ರಾಮದಲ್ಲಿ ಗುರುವಾರ ಒಂದೇ ದಿನ ಏಳು ಜನ ಸಾವನ್ನಪ್ಪಿದ್ದಾರೆ. ಒಂದು ಮಗು ಅಕಾಲಿಕವಾಗಿ, ಮತ್ತೆ ಕೆಲವರು ಇತರ ರೋಗಗಳು ಹಾಗೂ ವಯೋಸಹಜವಾಗಿ ಮೃತಪಟ್ಟಿದ್ದಾರೆ.
ಸುನೀಲ್ (28), ಸಂತೋಷ್ (39), ದೊಡ್ಡ ಮಾರಮ್ಮ (68), ಭೀಮಕ್ಕ (68), ಈರಮ್ಮ (72), ಶಾಂತಮ್ಮ (73) ಹಾಗೂ ಎರಡು ದಿನದ ಮಗು ಸಾವನ್ನಪ್ಪಿದವರು. ಈ ಪೈಕಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಮತ್ತು ಎರಡು ದಿನದ ಗಂಡು ಮಗು ಸೇರಿದೆ.
ಪಾಲಿಕೆ ವ್ಯಾಪ್ತಿಯ 43ನೇ ವಾರ್ಡ್‌ನ ಹೊಸ ಕುಂದವಾಡ ಗ್ರಾಮದಲ್ಲಿ ಒಟ್ಟು 10 ಸಾವಿರ ಜನಸಂಖ್ಯೆ ಇದ್ದು, 800ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ಸಂಖ್ಯೆಯ ಸಾವು ಸಂಭವಿಸಿದೆ.
"ಗ್ರಾಮದಲ್ಲಿ 13 ವರ್ಷಗಳ ಬಳಿಕ ಮಾರಿಹಬ್ಬ ಮಾಡಲಾಗಿದೆ. ಹೊಸ ಕುಂದವಾಡ ಗ್ರಾಮಸ್ಥರು, ಹಳೇ ಕುಂದವಾಡ ಗ್ರಾಮಸ್ಥರನ್ನು ಬಿಟ್ಟು ಹಬ್ಬ ಮಾಡಿದ್ದೆವು. ಆ ಗ್ರಾಮಸ್ಥರನ್ನು ಬಿಟ್ಟು ಹಬ್ಬ ಮಾಡಿದ್ದರಿಂದ ಸ್ಮಶಾನದಲ್ಲಿ ಶವಗಳ ಅಂತ್ಯಕ್ರಿಯೆ ಮಾಡಲು ಬಿಡುತ್ತಿಲ್ಲ" ಎಂದು ಹೊಸ ಕುಂದವಾಡ ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗಾಗಿ, ನಮಗೆ ಶವಸಂಸ್ಕಾರಕ್ಕೆ ಭೂಮಿ ನೀಡಿ ಎಂದು ಮನವಿ ಮಾಡಿದ್ದಾರೆ.
ವಾಂತಿ, ಭೇದಿಯಿಂದ ಇಬ್ಬರು ಸಾವು: ಒಂದೇ ದಿನ ಏಳು ಮಂದಿ ಸಾವನ್ನಪ್ಪಿದ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರು ವಾಂತಿ, ಭೇದಿಯಿಂದ ಸಾವನ್ನಪ್ಪಿದ್ದು, ಉಳಿದವರು ವಯೋಸಹಜವಾಗಿ ಅಸುನೀಗಿದ್ದಾರೆ. ಒಂದು ಮಗು ಮಾತ್ರ ಹುಟ್ಟಿದ ಎರಡೇ ದಿನಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹೊಸಕುಂದುವಾಡ ಗ್ರಾಮಕ್ಕೆ ತಹಶೀಲ್ದಾರ್ ಅಶ್ವಥ್ ಭೇಟಿ: ಗ್ರಾಮಕ್ಕೆ ಭೇಟಿ ನೀಡಿದ ದಾವಣಗೆರೆ ತಹಶೀಲ್ದಾರ್ ಡಾ.ಅಶ್ವತ್ ಎಂ.ಬಿ. ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು. ವಯೋಸಹಜವಾಗಿ ಸಾವನಪ್ಪಿರುವವರ ಬಗ್ಗೆ ಗ್ರಾಮಸ್ಥರ ಬಳಿ ಮಾಹಿತಿ ಕಲೆ ಹಾಕಿದರು. ಬಳಿಕ ಮೃತರ ಅಂತ್ಯಕ್ರಿಯೆ ಕುರಿತು ಚರ್ಚೆ ನಡೆಸಿದ್ದು, ಸ್ಮಶಾನ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದ ಹೊಸ ಕುಂದವಾಡ ಗ್ರಾಮಸ್ಥರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಶವಸಂಸ್ಕಾರ ಮಾಡಲು ಸ್ಮಶಾನ ಸಮಸ್ಯೆ ಎದುರಾದ ಹಿನ್ನೆಲೆ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಮೃತರ ಅಂತ್ಯಕ್ರಿಯೆ ನಡೆಸಲು ಕುಂದವಾಡ ಗ್ರಾಮಕ್ಕೆ ಈಗಾಗಲೇ 3 ಎಕರೆ ಸ್ಮಶಾನ ಇದೆ. ಗ್ರಾಮಸ್ಥರು ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅದು ಇನ್ನೊಂದು ಇಲಾಖೆಯ ಅನುಮತಿ ಬೇಕಾಗಿರುವ ಕಾರಣ, ಆ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅಂತ್ಯಸಂಸ್ಕಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳ ಒಳಗಾಗಿ ಸಮಸ್ಯೆ ಇತ್ಯರ್ಥ ಆಗಲಿದೆ. ಏಳು ಜನರ ಅಂತ್ಯಸಂಸ್ಕಾರ ಕುರಿತು ಗ್ರಾಮಸ್ಥರೊಟ್ಟಿಗೆ ಚರ್ಚೆ ಮಾಡಲಾಗುತ್ತದೆ" ಎಂದರು.
ಇದನ್ನೂ ಓದಿ: ಶಿವಮೊಗ್ಗ: ಡೆಂಗ್ಯೂ ಜ್ವರದಿಂದ ರಿಪ್ಪನ್‌ಪೇಟೆ ಮಹಿಳೆ ಸಾವು - Dengue Fever