ಶಿವಮೊಗ್ಗ: ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡ ವಿಧಾನ ಪರಿಷತ್ನ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ (69) ಇಂದು ಅಕಾಲಿಕ ನಿಧನರಾಗಿದ್ದಾರೆ. ಬಿಜೆಪಿ ಹಿರಿಯ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್ ಸಂತಾಪ: ಹಿರಿಯರು, ನನ್ನ ಆತ್ಮೀಯರು, ಮಾರ್ಗದರ್ಶಕರು ಆದ ಶ್ರೀ ಎಂ.ಬಿ. ಭಾನುಪ್ರಕಾಶ್ ಅವರ ಹಠಾತ್ ನಿಧನದ ಸುದ್ದಿ ತೀವ್ರ ಆಘಾತ ಮೂಡಿಸಿದೆ ಎಂದು ಪ್ರತಿಪಕ್ಷದ ನಾಯಕರ ಆರ್.ಅಶೋಕ್ ಹೇಳಿದ್ದಾರೆ. ತಮ್ಮ ಜೀವನದುದ್ದಕ್ಕೂ ಜನಪರ ಹೋರಾಟ, ಸಂಘರ್ಷ, ಸಂಘಟನೆಯಲ್ಲೇ ಕಳೆದ ಭಾನುಪ್ರಕಾಶ್ ಅವರು ತಮ್ಮ ಕೊನೆ ಉಸಿರನ್ನೂ ಹೋರಾಟದಲ್ಲೇ ಕಳೆದಿದ್ದು ಅವರ ಹೋರಾಟದ ಬದುಕಿನ ದ್ಯೋತಕವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದ ಭಾನುಪ್ರಕಾಶ್ ಅವರು ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಕುಟುಂಬ ಸದಸ್ಯರು, ಬಂಧು-ಬಳಗ ಹಾಗು ಸ್ನೇಹಿತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಎಸ್ವೈ ಸಂತಾಪ: ಮಾಜಿ ವಿಧಾನಪರಿಷತ್ ಸದಸ್ಯರು, ಸಂಘದ ನಿಷ್ಠಾವಂತ ಸ್ವಯಂಸೇವಕರು, ಪಕ್ಷದ ಉಪಾಧ್ಯಕ್ಷರೂ ಆಗಿ ಪಕ್ಷ ಸಂಘಟನೆಗಾಗಿ ನಿರಂತರ ಶ್ರಮಿಸಿದ್ದ ಸರಳ, ಸಜ್ಜನ, ಆತ್ಮೀಯರೂ ಆದ ಎಂ.ಬಿ. ಭಾನುಪ್ರಕಾಶ್ ಹಠಾತ್ ನಿಧನ ಹೊಂದಿರುವ ಸುದ್ದಿ ಅತೀವ ಆಘಾತವನ್ನು ತಂದಿದೆ. ತಮ್ಮ ಕೊನೆ ಉಸಿರಿರುವವರೆಗೂ ಪಕ್ಷಕ್ಕಾಗಿ ದುಡಿದ ಅವರ ಪರಿಶ್ರಮ, ಬದ್ಧತೆ ನಿಜಕ್ಕೂ ಸ್ತುತ್ಯರ್ಹ. ಅಂತಹ ನಿಷ್ಠಾವಂತ ಹಿರಿಯ ಮುಖಂಡರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅಗಲಿದ ಆ ಹಿರಿಯ ಚೇತನಕ್ಕೆ ಭಗವಂತ ಸದ್ಗತಿಯನ್ನು ನೀಡಲಿ, ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಬೊಮ್ಮಾಯಿ ಸಂತಾಪ : ಮಾಜಿ ವಿಧಾನ ಪರಿಷತ್ ಸದಸ್ಯರು, ನಮ್ಮ ಪಕ್ಷದ ಹಿರಿಯ ನಾಯಕ ಎಂ. ಬಿ. ಭಾನುಪ್ರಕಾಶ್ ಅವರು ನಿಧನರಾದ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರು ಕುಟುಂಬಕ್ಕೆ ಕರುಣಿಸಲಿ ಎಂದು ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ವಿಜಯೇಂದ್ರ ಸಂತಾಪ: ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (68 ವರ್ಷ) ಅವರ ನಿಧನ ಅತ್ಯಂತ ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಹಿರಿಯರು, ಮಾರ್ಗದರ್ಶಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು, ವಿಧಾನಪರಿಷತ್ ಮಾಜಿ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾತ್ರವಲ್ಲದೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ ಹಾಗೂ ಕರಾವಳಿ ಕರ್ನಾಟಕದ ಲೋಕಸಭಾ ಕ್ಲಸ್ಟರ್ ಪ್ರಮುಖರಾಗಿ ಅವರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡಿದವರು ಎಂದು ತಿಳಿಸಿದ್ದಾರೆ.
ಭಾನುಪ್ರಕಾಶ್ ಅವರ ಬಗ್ಗೆ ಮಾತನಾಡಿದ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಇಂದು ಬಿಜೆಪಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್-ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದೆವು. ನಾವು ನಗರದ ಶಿವಪ್ಪ ವೃತ್ತದಿಂದ ವಿಶೇಷವಾಗಿ ಅಣುಕು ಶವ ಯಾತ್ರೆಯನ್ನು ಮಾಡುವ ಮೂಲಕ ಪ್ರಾರಂಭ ಮಾಡಿದ್ದೆವು. ಭಾನುಪ್ರಕಾಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದೆವು. ಭಾನುಪ್ರಕಾಶ್ ಹಾಗೂ ನಾವು ಸೇರಿ ಸರ್ಕಾರದ ವಿರುದ್ಧ ಭಾಷಣ ಮಾಡಿದ್ದೆವು. ನಮ್ಮ ಪ್ರತಿಭಟನೆ ಮ. 12-30ಕ್ಕೆ ಮುಗಿಯಿತು. ನಾವು ನಮ್ಮ ಕೆಲಸಕ್ಕೆ ಹೊರಟೆವು. ಆಗ ಭಾನುಪ್ರಕಾಶ್ ಅವರು ಕಾರು ಹತ್ತುತ್ತಿದ್ದಂತೆಯೇ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಅದೇ ಕಾರಿನಲ್ಲಿ ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಭಾನು ಪ್ರಕಾಶ್ ಅವರು ಪ್ರಾಣ ಬಿಟ್ಟಿದ್ದಾರೆಂದು ತಿಳಿಸಿದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದರು.
ಪರಿಷತ್ ಸದ್ಯರಾದ ಭಾರತೀ ಶೆಟ್ಟಿ ಅವರು ಭಾನುಪ್ರಕಾಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜಿಲ್ಲೆ ಅಷ್ಟೆ ಅಲ್ಲ, ರಾಜ್ಯಾದ್ಯಂತ ಸಹ ಬಿಜೆಪಿಯ ಕಾರ್ಯಕರ್ತರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಚಾರಿತ್ರ್ಯವನ್ನು ಹೇಗೆ ಇಟ್ಟುಕೊಳ್ಳಬೇಕು, ಜನಸಾಮಾನ್ಯರೊಂದಿಗೆ ಹೇಗೆ ಇರಬೇಕು, ನಮ್ಮ ರಾಜಕೀಯ ಬದುಕು ಹೇಗೆ ಕೂಡಿರಬೇಕು ಎಂಬುದನ್ನು ಪ್ರತಿಕ್ಷಣ ಮಾರ್ಗದರ್ಶನ ನೀಡುತ್ತಿದ್ದರು. ಒಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಇಂತಹ ಸಾವು ಸಿಗುತ್ತದೆ. ಅವರು ಸಾಮಾಜಿಕ ಹೋರಾಟವನ್ನು ನಡೆಸಿದ್ದರು. ನಮಗೆ ಈಗಲೂ ಸಹ ಭಾನುಪ್ರಕಾಶ್ ಅವರು ಇಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.