ಬೆಂಗಳೂರು: ಕೋಮುವಾದ ಸೃಷ್ಟಿಸುವ ರೀತಿಯಲ್ಲಿ ಮುಖ್ಯಮಂತ್ರಿ ವಿರುದ್ಧ ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿ, ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ನಗರ ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗೋವಿಂದರಾಜ ನಗರದ ನಿವಾಸಿ ಹರೀಶ್ ನಾಗರಾಜು ಎಂಬವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಿದ್ದರಾಮಯ್ಯನವರ ಭಾವಚಿತ್ರ ಬಳಸಿಕೊಂಡು ಪತ್ರಿಕೆಯೊಂದರಲ್ಲಿ 'ಹಿಂದುಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು: ಸಿದ್ರಾಮಯ್ಯ' ಎಂದು ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿರುವ ರೀತಿಯಲ್ಲಿ ಕಿಡಿಗೇಡಿಗಳು ಪೋಸ್ಟ್ ಮಾಡಿದ್ದರು. ಇದೇ ಪೋಸ್ಟ್ ಅನ್ನು ಧಾತ್ರಿ ಗೋಶಾಲೆ ಗೋಳೂರು ವಾಟ್ಸ್‌ಆ್ಯಪ್ ಗ್ರೂಪ್ ಆಡ್ಮಿನ್ನಿಂದ ಸಂದೇಶ ಹರಡಿಸಿದ್ದರು. ಕೆಲವರು ತಮ್ಮ ಫೇಸ್ಬುಕ್ ಪೇಜ್ಗಳಲ್ಲಿ ಪೋಸ್ಟ್ ಮಾಡಿ ಅವಹೇಳನಕಾರಿಯಾಗಿ ನಿಂದಿಸಿದ್ದರು. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದರ ಹಿಂದಿರುವ ದುಷ್ಟ ಶಕ್ತಿ ಯಾವುದು ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಆದಷ್ಟು ಬೇಗ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು. ಸುಳ್ಳು ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಇದರ ಸೃಷ್ಟಿಕರ್ತರು, ಅವರ ಬೆನ್ನ ಹಿಂದೆ ಬೆಂಬಲಕ್ಕೆ ನಿಂತಿರುವವರು ಹೀಗೆ ಫೇಕ್ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರುಸಹಿತ ಕಿತ್ತೆಸೆಯುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ನಮ್ಮ ಒಕ್ಕಲಿಗ ಸಿಎಂ ಇಳಿಸಿದ್ರಲ್ಲ ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದ್ಯೋ ಇಲ್ವೋ ಗೊತ್ತಿಲ್ಲ: ಡಿಕೆಶಿ - D K Shivakumar