ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14 ರಂದು ಮಂಗಳೂರಿಗೆ ಭೇಟಿ ನೀಡಿ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಪಿಜಿ ಅಧಿಕಾರಿಗಳು ಗುರುವಾರ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ. ಭದ್ರತೆಯ ಹೊಣೆ ಹೊತ್ತಿರುವ ಎಸ್ಪಿಜಿ ತಂಡ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ರೋಡ್ ಶೋ ನಡೆಯುವ ಮಾರ್ಗದ ಉದ್ದಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಪರಿಶೀಲನೆ ನಡೆಸಿದೆ. ನಗರದ ಲೇಡಿಹಿಲ್ನಲ್ಲಿರುವ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ರೋಡ್ ಶೋ ನಡೆಯಲಿದೆ. ಎ.14ರಂದು ಸಂಜೆ 6 ಗಂಟೆ ಸುಮಾರಿಗೆ ನಾರಾಯಣ ಗುರು ಸರ್ಕಲ್ ಬಳಿ ಮೋದಿ ಆಗಮಿಸಲಿದ್ದಾರೆ. ನಾರಾಯಣ ಗುರು ಪ್ರತಿಮೆಗೆ ಮೋದಿ ಅವರು ಮಾಲಾರ್ಪಣೆ ಮಾಡಿದ ಬಳಿಕ ರೋಡ್ ಶೋ ಆರಂಭವಾಗಲಿದೆ.
ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಿಂದ ಆರಂಭವಾಗುವ ರೋಡ್ ಶೋ ಬಳಿಕ ಲಾಲ್ಬಾಗ್ ತಲುಪಿ ಬಳ್ಳಾಲ್ ಬಾಗ್ ದಾಟಿ ಎಂ.ಜಿ ರಸ್ತೆಯಲ್ಲಿ ಸಾಗಿ ಬಳಿಕ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ ತಲುಪಲಿದೆ. ಅಲ್ಲಿಂದ ಕೆ.ಎಸ್ ರಾವ್ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ. ಸುಮಾರು 2.5 ಕಿ.ಮೀ ಉದ್ದಕ್ಕೆ ಮೋದಿ ರೋಡ್ ಶೋ ನಡೆಸುವ ರಸ್ತೆ ಉದ್ದಕ್ಕೂ ಎಸ್ಪಿಜಿ ಅಧಿಕಾರಿಗಳ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಸಮಾವೇಶ : ಮಂಗಳೂರಿಗೆ ಆಗಮಿಸುವುದಕ್ಕೂ ಮೊದಲು ಅಂದು ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಮೈದಾನದಲ್ಲಿ ಚಾಮರಾಜನಗರ, ಮಂಡ್ಯ ಕ್ಷೇತ್ರ ಸೇರಿಸಿ ಸಮಾವೇಶ ನಡೆಸಲಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಮುಖಂಡರನ್ನೊಳಗೊಂಡ ಸಮಾವೇಶ ಆಗಿರಲಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಏ.14ರಂದು ರಾಜ್ಯದಲ್ಲಿ ಮೋದಿ ಮತ ಪ್ರಚಾರ: ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್ ಶೋ - Modi Campaign