ರಾಮನಗರ : ಚನ್ನಪಟ್ಟಣ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆ ದಾಳಿಯಿಂದ ನಲುಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. 2 ಆನೆಗಳ ಸೆರೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕ ಬೆನ್ನಲ್ಲೇ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಂತೂ ಎರಡನೆ ಆನೆಯನ್ನ ಸೆರೆ ಹಿಡಿಯಲಾಗಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗಳು ನಾಶವಾಗುತ್ತಿದ್ದವು. ಹೀಗಾಗಿ ಸರ್ಕಾರ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ನೀಡಿತ್ತು. ಈ ಹಿನ್ನೆಲೆ ಕಳೆದ ವಾರ ತಾಲೂಕಿನ ಕೆಂಗಲ್ ಆಂಜನೇಯನಿಗೆ ಪೂಜೆ ಸಲ್ಲಿಸಿ, ಕ್ಯಾಪ್ಟನ್ ಮಹೇಂದ್ರ ಟೀಂನೊಂದಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದ ಹಿಂದೆ ಒಂದು ಆನೆಯನ್ನ ಸೆರೆ ಹಿಡಿದಿದ್ದರೆ, ಇಂದು (ಶನಿವಾರ) ಎರಡನೇ ಪುಂಡಾನೆ ಸೆರೆ ಹಿಡಿದಿದ್ದಾರೆ.
ದಶಕದಿಂದ ರೈತರಿಗೆ ತೊಂದರೆ ನೀಡುತ್ತಿದ್ದ ಎರಡನೆ ಕಾಡಾನೆ ಸೆರೆ - ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ತೆಂಗಿನಕಲ್ಲು, ಅಚ್ಚಲು, ಕಬ್ಬಾಳು, ದೊಡ್ಡಮಣ್ಣಗುಡ್ಡೆ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ಪ್ರತಿದಿನವೂ ರೈತರ ಮಾವು, ರಾಗಿ, ಬಾಳೆ, ಭತ್ತ, ಹಲಸು ಸೇರಿ ಹಲವು ಬೆಳೆಗಳು ನಾಶಮಾಡುತ್ತಲೇ ಇತ್ತು. ಈ ಹಿನ್ನೆಲೆ ಕಳೆದ ಕೆಲ ದಿನಗಳ ಹಿಂದೆ ಚನ್ನಪಟ್ಟಣ ಶಾಸಕ ಸಿ. ಪಿ ಯೋಗೇಶ್ವರ್ ಅವರು ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಇದರ ಜೊತೆಗೆ ರೈತರು ಸಹ ಕಾಡಾನೆ ಸೆರೆ ಹಿಡಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಎರಡು ಕಾಡಾನೆ ಸೆರೆಗೆ ಮಡಿಕೇರಿಯಿಂದ 6 ಸಾಕಾನೆಗಳು ಚನ್ನಪಟ್ಟಣಕ್ಕೆ ಬಂದಿದ್ದವು.
ಕ್ಯಾಪ್ಟನ್ ಮಹೇಂದ್ರ ಸಾರಥ್ಯದಲ್ಲಿ ಎರಡನೇ ಕಾಡಾನೆ ಸೆರೆ; ಕಾಡಾನೆ ಸೆರೆಗೆ ಮಹೇಂದ್ರ, ಭೀಮ, ಪ್ರಶಾಂತ, ಸುಗ್ರೀವ, ಧನಂಜಯ, ಹರ್ಷ ಬಂದಿದ್ದವು. ಶಾಸಕ ಸಿ. ಪಿ ಯೋಗೇಶ್ವರ್, ಪತ್ನಿ ಶೀಲಾ ಜೊತೆಗೆ DFO ರಾಮಕೃಷ್ಣಪ್ಪ ಹಾಗೂ ರೈತರು ಆನೆಗಳಿಗೆ ಪೂಜೆ ಮಾಡಿದ್ದರು. ಸದ್ಯಕ್ಕೆ ಎರಡು ಕಾಡಾನೆ ಹಿಡಿಯಲು ಅನುಮತಿ ಸಿಕ್ಕಿದೆ ಎಂದು ಡಿಎಫ್ಒ ತಿಳಿಸಿದ್ದರು.
ಇದೀಗ ತಂಡದ ನಾಯಕ ಮಹೇಂದ್ರನ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿ ಕಾಡಾನೆಯನ್ನ ಸೆರೆ ಹಿಡಿದಿದ್ದಾರೆ. ಅಂತೂ ಕಾರ್ಯಾಚರಣೆ ಮೊದಲ ದಿನವೇ ಒಂದು ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡಾನೆ ಸೆರೆಯಿಂದ ಸದ್ಯದ ಮಟ್ಟಿಗೆ ರೈತರಿಗೆ ತುಸು ನೆಮ್ಮದಿ ಬಂದಿದೆ.
ಕಾರ್ಯಾಚರಣೆ ಯಶಸ್ವಿ, ಸೆರೆ ಸಿಕ್ಕ ಕಾಡಾನೆ - ಸಂಜೆ ವೇಳೆಗೆ ಕಾರ್ಯಾಚರಣೆ ಶುರು ಮಾಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದರು. ನಂತರ ಅದನ್ನ ಸೆರೆ ಹಿಡಿದು ಬಳಿಕ ಲಾರಿಯಲ್ಲಿ ರವಾನೆ ಮಾಡಿದರು.
ಇದನ್ನೂ ಓದಿ : ರಾಮನಗರದಲ್ಲಿ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ: ಒಂದು ಕಾಡಾನೆ ಸೆರೆ - WILD ELEPHANT CAPTURE OPERATION