ಬೆಳಗಾವಿ: "7 ಸಿ ಸೆಕ್ಷನ್ ಯೋಜನೆಯಡಿ ಎಸ್ಸಿಪಿ, ಟಿಎಸ್ಪಿ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು ನಿಜ" ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.
"ಎಸ್ಟಿಪಿ, ಟಿಎಸ್ಪಿ ಅನುದಾನ ಗ್ಯಾರಂಟಿಗಾಗಿ ಸರ್ಕಾರ ಬಳಸಿಕೊಳ್ಳುತ್ತಿರುವ ವಿಚಾರದ ಕುರಿತು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಇಡೀ ದೇಶದಲ್ಲಿ ಎಸ್ಟಿಪಿ, ಟಿಎಸ್ಪಿ ಅತ್ಯುತ್ತಮ ನ್ಯಾಯಬದ್ಧ ಕಾರ್ಯಕ್ರಮ. ತಳಮಟ್ಟದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆ ಸಿದ್ದರಾಮಯ್ಯ ಮಾಡಿದ್ದರು. ಅದೇ ರೀತಿ 7ಸಿ, 7ಡಿ ಸೆಕ್ಷನ್ಗಳನ್ನು ಹಾಕಿ ಕಾನೂನಾತ್ಮಕಗೊಳಿಸಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಇನ್ನು ಅತ್ಯಧಿಕ ಸಂದರ್ಭದಲ್ಲಿ ಉತ್ತಮ ಕಾರ್ಯಗಳಿಗೆ ಆ ಅನುದಾನ ಬಳಸಬಹುದು ಎಂಬುದನ್ನು ಸೆಕ್ಷನ್ 7ಸಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಸಮಾಜದ ಮುಖ್ಯವಾಹಿನಿಗೆ ಬಂದು, ಆರ್ಥಿಕವಾಗಿ ಹೆಣ್ಣು ಮಕ್ಕಳು ಸದೃಢವಾಗಲಿ ಎಂಬ ಉದ್ದೇಶದಿಂದ ಶಕ್ತಿ ಯೋಜನೆ ಸೇರಿ ಅನೇಕ ಯೋಜನೆಗಳಿಗೆ ಆ ಅನುದಾನವನ್ನು ಸರ್ಕಾರ ಬಳಸಿಕೊಂಡಿದೆ" ಎಂದು ಸಮರ್ಥಿಸಿಕೊಂಡರು.
ಆದರೆ, ವಿವಿಧ ಸಂಘಟನೆಗಳಿಂದ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಕೇವಲ ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂಬ ಒತ್ತಾಯ ಕೇಳಿ ಬಂದಿದ್ದು, ಈ ಬಗ್ಗೆ ನಾನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಳ್ಳುತ್ತೇನೆ" ಎಂದರು.
ಇನ್ನು ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ವಿಚಾರದ ಕುರಿತು ಮಾತನಾಡಿ, "ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಸರ್ಕಾರ ಎಸ್ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದ್ದು, ಸರ್ಕಾರ ದಿಟ್ಟ ಕ್ರಮ ವಹಿಸಿದೆ" ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದ್ರೂ ನಮ್ಮ ಜನ ಇನ್ನೂ ಅರಣ್ಯದಲ್ಲೇ ವಾಸವಿದ್ದಾರೆ. 2011ರ ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ 10 ಲಕ್ಷ 90 ಸಾವಿರ ಜನ ಅಲೆಮಾರಿಗಳಿದ್ದಾರೆ. ಸರ್ಕಾರದಿಂದ ಬರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಅರಿವಿಲ್ಲ. 2019ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಅಲೆಮಾರಿ ಕೋಶ ಪ್ರಾರಂಭ ಮಾಡಿದರು. ನಂತರ ಇದು ನಿಗಮವಾಗಿ ಬದಲಾವಣೆ ಆಗಿದೆ. ಅಲೆಮಾರಿ ಸಮುದಾಯಗಳ ಮುಖಂಡರನ್ನು ಭೇಟಿಯಾಗಲು ಬಂದಿದ್ದೇನೆ. ಇಲ್ಲಿ ಎಲ್ಲರಿಗೂ ಭೇಟಿಯಾಗಿ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುತ್ತೇನೆ. ನಾಳೆ ಜಿಲ್ಲೆಯ ಅಲೆಮಾರಿ ಮುಖಂಡರೊಂದಿಗೆ ಸಮನ್ವಯ ಸಭೆ ಮಾಡುತ್ತಿದ್ದೇನೆ ಎಂದು ಪಲ್ಲವಿ ಜಿ. ಹೇಳಿದರು.
ಇದನ್ನೂ ಓದಿ: ಎಸ್ಇಪಿ, ಟಿಎಸ್ಪಿ ಹಣ ಬಳಕೆ ಬಗ್ಗೆ ಬಿಜೆಪಿಯವರಿಗೆ ಕೇಳುವ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ - Lok Sabha Election 2024